ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ತಾಲೂಕಿನ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ₹670 ಕೋಟಿ ವೆಚ್ಚದ ಮಹತ್ವದ ಯೋಜನೆಗೆ ಗ್ರಹಣ ಹಿಡಿದಿದೆ!ತಾಲೂಕಿನ ಪಾಲಯ್ಯನಕೋಟೆ ಹತ್ತಿರ ಈ ಯೋಜನೆಗೆ ಈ ಹಿಂದೆ ಇದ್ದ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವಧಿಯಲ್ಲಿ ಭೂಮಿಪೂಜೆ ಮಾಡಲಾಗಿತ್ತು. ಯೋಜನೆ ಸಂಪೂರ್ಣ ಮುಗಿಸಿ ಅವರ ಅವಧಿಯಲ್ಲಿ ಉದ್ಘಾಟನೆ ಆಗುತ್ತದೆ ಎಂದು ತಾಲೂಕಿನ ಜನತೆ ಅಂದುಕೊಂಡಿದ್ದರು. ಆದರೆ ಅದೇ ಸಮಯದಲ್ಲಿ ಚುನಾವಣೆ ಬಂದು ಅವರು ತವರು ಕ್ಷೇತ್ರಕ್ಕೆ ವಲಸೆ ಹೋಗಿದ್ದರಿಂದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷವೇ ಉರುಳಿದರೂ ಪ್ರಗತಿ ಕಾಣಲಿಲ್ಲ.
ಯೋಜನೆ ಜಾರಿಯಾಗಿ ಎರಡು ವರ್ಷ ಕಳೆದು ಇಲ್ಲಿಯವರೆಗೆ ಶೇ.95 ಕಾಮಗಾರಿ ಮುಗಿದಿದೆ. ಇನ್ನುಳಿದ ಶೇ.5 ಕಾಮಗಾರಿ ಬಾಕಿ ಇವೆ. 74 ಕೆರೆಗಳ ನೀರು ತುಂಬಿಸುವ ಯೋಜನೆ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಳಚಲು ಮುನ್ನುಡಿ ಬರೆದಿತ್ತು. ಕಾಮಗಾರಿಯೂ ಭರದಿಂದ ನಡೆಯಿತು. ಶೇ.90 ಕಾಮಗಾರಿ ಮುಗಿದಿತ್ತು.ಆದರೆ, ಹಡಗಲಿ ಹತ್ತಿರ ಕೆಲವು ರೈತರು ಪೈಪ್ ಲೈನ್ ಗೆ ಅಡ್ಡಿಪಡಿಸಿದರು. ಜತೆಗೆ ಅರಣ್ಯದಲ್ಲಿ ಪೈಪ್ ಲೈನ್ ಹೋಗಲು ಅರಣ್ಯ ಇಲಾಖೆಯ ಅನುಮತಿ ದೊರಕುವುದು ಕೂಡ ತಡವಾಯಿತು. ಇದೇ ಸಮಯದಲ್ಲಿ ವಿಧಾನಸಭಾ ಚುನಾವಣೆ ಬಂತು. ಕೂಡ್ಲಿಗಿ ಕ್ಷೇತ್ರಕ್ಕೆ ಶಾಸಕರಾಗಿ ಡಾ.ಎನ್.ಟಿ. ಶ್ರೀನಿವಾಸ್ ಆಯ್ಕೆಯಾದರು. ಈ ಯೋಜನೆ ಇವರ ಹೆಗಲ ಮೇಲೆ ಬಿದ್ದಿತು. ಇವರು ವರ್ಷದಿಂದ ಪ್ರಯತ್ನಿಸಿದರೂ ಯೋಜನೆ ಇನ್ನು ಸಾಕಾರವಾಗಿಲ್ಲ.
ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅರಣ್ಯ ಇಲಾಖೆಯ ಒಪ್ಪಿಗೆ ದೊರಕಲು ಹಾಗೂ ಕೆಲವು ರೈತರು ತಮ್ಮ ಜಮೀನುಗಳಲ್ಲಿ ಪೈಪ್ ಲೈನ್ ಹೋಗಲು ಅಡ್ಡಿಪಡಿಸಿದ್ದರಿಂದ ಯೋಜನೆಗೆ ತಡವಾಯಿತು. ಈ ಬಗ್ಗೆ ನಿರಂತರ ಪ್ರಯತ್ನ ಮಾಡುತ್ತಿದ್ದು, ಆದಷ್ಟು ಬೇಗ ಈ ಯೋಜನೆ ಸಾಕಾರಗೊಳಿಸುವೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.ಕಳೆದ ವರ್ಷ ಕುಡಿಯಲು ನೀರಿಲ್ಲದಂತಹ ಬರಗಾಲ ಬಂದಿತ್ತು. ಆ ಸಮಯದಲ್ಲಿ ನಮ್ಮ ಕೆರೆಗಳಿಗೆ ನೀರು ಬಂದಿದ್ದರೆ ಸಂತಸವಾಗುತಿತ್ತು. ಈ ವರ್ಷ ತುಂಗಭದ್ರಾ ನದಿ ತುಂಬಿ ಯಥೇಚ್ಛವಾಗಿ ನೀರು ಹರಿಯುತ್ತಿದೆ. ಈ ಸಂದರ್ಭದಲ್ಲಿ ಕೆರೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರೆ ರೈತರ ಬದುಕು ಹಸನಾಗುತ್ತಿತ್ತು ಎನ್ನುತ್ತಾರೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ರೈತ ಮಾರಪ್ಪ.