74 ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರ ಜಾರಿ: ಶಾಸಕ ಶ್ರೀನಿವಾಸ

| Published : Jul 13 2024, 01:37 AM IST

74 ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರ ಜಾರಿ: ಶಾಸಕ ಶ್ರೀನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆ ತುಂಬಿಸುವ ಯೋಜನೆಯಲ್ಲಿ ಕೆಲವು ತಾಂತ್ರಿಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಕೊಟ್ಟೂರು: ಕೂಡ್ಲಿಗಿ ವಿಧಾನಸಭೆ ವ್ಯಾಪ್ತಿಯ 74 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಇದೇ ಮಳೆಗಾಲದಲ್ಲಿ ಯೋಜನೆ ಸಾಕಾರಗೊಳಿಸಲು ತಯಾರಿ ನಡೆಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಕೂಡ್ಲಿಗಿ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಉಜ್ಜಯಿನಿ ಗ್ರಾಮದ ಕೂಡ್ಲಿಗಿ ರಸ್ತೆಯಲ್ಲಿನ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಶುಕ್ರವಾರ ಮಾತನಾಡಿದರು.

ಕೆರೆ ತುಂಬಿಸುವ ಯೋಜನೆಯಲ್ಲಿ ಕೆಲವು ತಾಂತ್ರಿಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸುಂಕದಕಲ್ಲು ಬಳಿಯ ಅರಣ್ಯ ಪ್ರದೇಶದಲ್ಲಿ ಯೋಜನೆ ಕಾಮಗಾರಿ ನಡೆಯವುದರಿಂದ ಆ ಪ್ರದೇಶಕ್ಕೆ ಪರ್ಯಾಯವಾಗಿ ಅರಣ್ಯ ಬೆಳೆಸಲು ಬದಲಿ ಜಾಗ ನೀಡಿದ್ದು, ಅರಣ್ಯ ಇಲಾಖೆಗೆ ನೀರಾವರಿ ನಿಗಮದಿಂದ ಪಾವತಿಸಬೇಕಾದ ಪರಿಹಾರ ಮೊತ್ತವನ್ನು ಶೀಘ್ರದಲ್ಲಿ ಪಾವತಿಸುವ ಕಾರ್ಯ ನಡೆಯಲಿದೆ. ಅದರೊಂದಿಗೆ ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸಿಕೊಂಡು ಯೋಜನೆಯನ್ನು ಇದೇ ಮಳೆಗಾಲದಲ್ಲಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಲು ಶ್ರಮ ವಹಿಸಲಾಗುವುದು ಎಂದರು.

ಉಜ್ಜಯಿನಿ ಭಾಗದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಹಳ್ಳಕ್ಕೆ ಸೇತುವೆ ನಿರ್ಮಾಣವಾಗಿರಲಿಲ್ಲ. ಇದೀಗ ಕೆಕೆಆರ್‌ಡಿಬಿಯಡಿಯ ₹2 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುವುದು. ಉಜ್ಜಯಿನಿಯಿಂದ ಕೂಡ್ಲಿಗಿ ರಸ್ತೆಯನ್ನು ಎಸ್‌ಡಿಪಿ ಯೋಜನೆಯಡಿ ₹20 ಕೋಟಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದರಲ್ಲಿ ಉಜ್ಜಯಿನಿ ಗ್ರಾಮದ ತೇರು ಬೀದಿ ರಸ್ತೆ ಬದಿ ಚರಂಡಿ, ವಿದ್ಯುತ್ ದೀಪ ಅಳವಡಿಕೆ ಮಾಡಲಾಗುವುದು. ಉಜ್ಜಯಿನಿ ತೂಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ₹3.78 ಕೋಟಿಯಲ್ಲಿ ನಡೆಯುತ್ತಿದ್ದು, ಇನ್ನೆರೆಡು ಕಿ.ಮೀ. ಮಾತ್ರ ಬಾಕಿ ಇದ್ದು, ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಡಿ.ನಿಂಗಮ್ಮ, ಮರುಳಸಿದ್ದಪ್ಪ, ಕೊಡದಪ್ಪ, ಶಾಂತನಗೌಡ, ಲೋಕಣ್ಣ, ಅಂಜಿನಪ್ಪ, ನಿಂಗನಗೌಡ ಇದ್ದರು.