ಮಳೆಯಿಂದ ಶಿಥಿಲಗೊಂಡ 74 ಶಾಲಾ ಕೊಠಡಿ

| Published : Aug 30 2025, 01:01 AM IST

ಸಾರಾಂಶ

ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಹಳೆಯ ಶಾಲಾ ಕೊಠಡಿಗಳ ಮೇಲ್ಚಾವಣಿ ನೀರಿನಿಂದಾಗಿ ಸಂಪೂರ್ಣ ಶಿಥಿಲಾವಸ್ಥೆಗೆ ಜಾರಿವೆ. ಕೆಲವು ಕಟ್ಟಡಗಳ ಮೇಲ್ಚಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದ್ದು, ಕಬ್ಬಿಣದ ಸರಳು ಹೊರ ಕಾಣಿಸುತ್ತಿವೆ.

ಪಾಲಾಕ್ಷ ಬಿ. ತಿಪ್ಪಳ್ಳಿ

ಯಲಬುರ್ಗಾ:

ಕೇವಲ ಶಿಕ್ಷಣ ಮಾತ್ರವಲ್ಲದೆ, ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ಆ ನಿಟ್ಟಿನಲ್ಲಿ ಮಕ್ಕಳ ಹಿತದೃಷ್ಟಿಯಿಂದ ದುಸ್ಥಿತಿಯಲ್ಲಿರುವ ಕೊಠಡಿ ಗುರುತಿಸಿ ದುರಸ್ತಿಗೊಳಿಸುವ ಕಾರ್ಯ ಕಾಲಕಾಲಕ್ಕೆ ಆಗಬೇಕಿದೆ. ಆದರೆ, ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಬಹುತೇಕ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿದ್ದು, ದುರಸ್ತಿ ಭಾಗ್ಯ ಕೂಡಿ ಬಂದಿಲ್ಲ.

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ೧೯೪ ಕಿರಿಯ ಹಾಗೂ ಹಿರಿಯ ಪ್ರಾಥಮಿಕ, ೬೩ ಪ್ರೌಢ ಶಾಲೆಗಳಿವೆ. ಆ ಪೈಕಿ ೩೭ ಶಾಲೆಗಳ ೭೪ ಕೊಠಡಿಗಳು ಮಳೆಯಿಂದಾಗಿ ಹಾನಿಗೀಡಾಗಿವೆ. ಅಲ್ಲದೆ ೫೭ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಚಾವಣಿ ನೆಲಸಮಗೊಳಿಸಬೇಕಿದೆ. ಇನ್ನೂ ೧೭೦ಕ್ಕೂ ಅಧಿಕ ಶಾಲಾ ಕೊಠಡಿ ಸಣ್ಣ-ಪುಟ್ಟ ದುರಸ್ತಿ ಹಂಚಿನಲ್ಲಿವೆ. ಮಳೆಯಿಂದಾಗಿ ಸೋರುವ ಮತ್ತು ಹಾನಿಗೊಳಗಾದ ಶಾಲಾ ಕೊಠಡಿಗಳ ಗುರುತಿಸಿ ಶಿಕ್ಷಣ ಇಲಾಖೆ ಪಟ್ಟಿ ತಯಾರಿಸಿದ್ದು, ದುರಸ್ತಿ ಭಾಗ್ಯ ಯಾವಾಗ ಕೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜೀವಭಯದಲ್ಲಿ ಕಲಿಕೆ:

ನಿರಂತರ ಸುರಿಯುತ್ತಿರುವ ಮಳೆಗೆ ಹಳೆಯ ಶಾಲಾ ಕೊಠಡಿಗಳ ಮೇಲ್ಚಾವಣಿ ನೀರಿನಿಂದಾಗಿ ಸಂಪೂರ್ಣ ಶಿಥಿಲಾವಸ್ಥೆಗೆ ಜಾರಿವೆ. ಕೆಲವು ಕಟ್ಟಡಗಳ ಮೇಲ್ಚಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದ್ದು, ಕಬ್ಬಿಣದ ಸರಳು ಹೊರ ಕಾಣಿಸುತ್ತಿವೆ. ಸೋರುವ ಕಟ್ಟಡದಲ್ಲಿಯೇ ಜೀವ ಭಯದಲ್ಲಿ ಮಕ್ಕಳ ಕಲಿಕೆ ಮುಂದುವರಿದಿದೆ. ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅಲ್ಲದೆ ಹೆಚ್ಚುವರಿ ಕೊಠಡಿ ಮಂಜೂರು ಮಾಡಿಸಲು ಆಸಕ್ತಿ ವಹಿಸಿದ್ದಾರೆ. ಆದರೆ, ಶಿಥಿಲಗೊಂಡ ಕೊಠಡಿಗಳ ದುರಸ್ತಿಗೆ ಏಕೆ ಮುತುವರ್ಜಿ ವಹಿಸುತ್ತಿಲ್ಲ ಎನ್ನುವುದು ಮಕ್ಕಳ ಪಾಲಕರ ಪ್ರಶ್ನೆಯಾಗಿದೆ. ಇನ್ನಾದರೂ ಸರ್ಕಾರ ದುಸ್ಥಿತಿಯಲ್ಲಿರುವ ಕೊಠಡಿ ದುರಸ್ತಿಗೊಳಿಸಿ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು ಎನ್ನುವುದು ಶಿಕ್ಷಣಪ್ರೇಮಿಗಳ ಆಶಯವಾಗಿದೆ.೧೯೯ ಶಾಲಾ ಕೊಠಡಿಗಳು ಮಂಜೂರು

ಯಲಬುರ್ಗಾ ಹಾಗೂ ಕುಕನೂರು ತಾಲೂಕಿಗೆ ೨೦೨೩-೨೪ರಿಂದ ಈ ವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ೧೯೯ ನೂತನ ಶಾಲಾ ಕೊಠಡಿಗಳು ಮಂಜೂರಾಗಿವೆ. ಅದರಲ್ಲಿ ೧೫೬ ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದೆ. ೨೯ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿವೆ. ೪೩ ಕಾಮಗಾರಿ ಪ್ರಾರಂಭವಾಗಬೇಕಿದೆ.ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ಗುರುತಿಸಿ ಪಟ್ಟಿ ತಯಾರಿಸಿ, ದುರಸ್ತಿಗಾಗಿ ಡಿಡಿಪಿಐ ಕಚೇರಿಗೆ ಸಲ್ಲಿಸಲಾಗಿದೆ. ಮಳೆಗಾಲದ ಬಳಿಕ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿದೆ. ೨೦೨೫-೨೬ನೇ ಸಾಲಿಗೆ ತಾಲೂಕಿನಲ್ಲಿ ಅವಶ್ಯವಿರುವ ಕಡೆ ೬೦ ನೂತನ ಶಾಲಾ ಕೊಠಡಿಗಳ ಬೇಡಿಕೆ ಸಲ್ಲಿಸುವಂತೆ ಶಾಸಕ ಬಸವರಾಜ ರಾಯರಡ್ಡಿ ಮಾಹಿತಿ ಕೇಳಿದ್ದಾರೆ.

ಅಶೋಕ ಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ, ಯಲಬುರ್ಗಾ