ಭಾರತ ಮಾಲ ಯೋಜನೆ ಅಡಿಯಲ್ಲಿ ನಡೆಯಿತ್ತಿರುವ ಬೆಳಗಾವಿ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 748ಎ ನಿರ್ಮಾಣದಿಂದ ರೈತರ ಜಮೀನುಗಳಿಗೆ ತೆರಳುವ ಸಾಂಪ್ರದಾಯಿಕ ರಸ್ತೆಗಳು ಮುಚ್ಚಿಹೋಗಿದ್ದು, ಅಂಡರ್‌ಪಾಸ್‌ಗಳ ನಿರ್ಮಾಣದಲ್ಲಿನ ಲೋಪಗಳಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಇಂದರಪಾಶ ಚಿಂಚರಕಿ

ಕನ್ನಡಪ್ರಭ ವಾರ್ತೆ ಮಸ್ಕಿ

ಭಾರತ ಮಾಲ ಯೋಜನೆ ಅಡಿಯಲ್ಲಿ ನಡೆಯಿತ್ತಿರುವ ಬೆಳಗಾವಿ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 748ಎ ನಿರ್ಮಾಣದಿಂದ ರೈತರ ಜಮೀನುಗಳಿಗೆ ತೆರಳುವ ಸಾಂಪ್ರದಾಯಿಕ ರಸ್ತೆಗಳು ಮುಚ್ಚಿಹೋಗಿದ್ದು, ಅಂಡರ್‌ಪಾಸ್‌ಗಳ ನಿರ್ಮಾಣದಲ್ಲಿನ ಲೋಪಗಳಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತಾಲೂಕಿನ ಮಟ್ಟೂರು ಹಾಗೂ ಸಂತೆಕೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನವಾರ, ಮುಸ್ಲಿಕಾರ್ಲಕುಂಟಿ, ಕುಣಿಕೆಲ್ಲೂರು, ಮಿಟ್ಟಿಕೆಲ್ಲೂರು ಮತ್ತು ಮಟ್ಟೂರು ಗ್ರಾಮಗಳ ಮೂಲಕ ಹಾದುಹೋಗಿರುವ ಬೆಳಗಾವಿ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 748ಎ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.ಆದರೆ ಇದರಿಂದ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮುಚ್ಚಿರುವ ಸ್ಥಳಗಳು ಹಾಗೂ ಅಂಡರ್‌ಪಾಸ್‌ಗಳನ್ನು ರೈತರ ಜಮೀನುಗಳಿಗೆ ಹೋಗುವ ರಸ್ತೆಗಳು ಬಂದ್‌ ಆಗಿವೆ. ಹೆದ್ದಾರಿಯವರು ಅವೈಜ್ಞಾನಿಕ ಅಂಡರ್‌ಪಾಸ್‌ಗಳಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.

ರೈತರಿಗೆ ಸುರಕ್ಷಿತ ವೈಜ್ಞಾನಿಕ ರಸ್ತೆ ಸಂಪರ್ಕ ಕಲ್ಪಿಸಲು ಅಗ್ರಹ : ಬೆಳಗಾವಿ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 748 ರಸ್ತೆ ಕಾಮಗಾರಿಯಿಂದ ರೈತರಿಗೆ ಸುರಕ್ಷಿತ ಹಾಗೂ ವೈಜ್ಞಾನಿಕ ಸಂಪರ್ಕ ರಸ್ತೆಗಳನ್ನು ಕಲ್ಪಿಸಲು ರೈತರು ಹಾಗೂ ಮಠಾಧೀಶರು ಸೇರಿದಂತೆ ಅನೇಕ ಪ್ರತಿಭಟನೆಗಳನ್ನು ಮಾಡಿ ಜಿಲ್ಲಾಧಿಕಾರಿ ಹಾಗೂ ಸಚಿವರಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಹೆದ್ದಾರಿ ನಿರ್ಮಾಣದಿಂದ ರೈತರು ತಮ್ಮ ಹೊಲಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದು ರಾಗಿದೆ. ಇದರಿಂದ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಜಮೀನು ಸಂಪರ್ಕ ರಸ್ತೆಗಳನ್ನು ಉಳಿಸಿ, ರೈತರು ಸುರಕ್ಷಿತವಾಗಿ ಸಂಚರಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಹೋರಾಟ ಸಮಿತಿಯ ಆಗ್ರಹ: ಹೆದ್ದಾರಿ ನಿರ್ಮಾಣದಿಂದ ಜಮೀನುಗಳಿಗೆ ತೆರಳುವ ಸಂಪರ್ಕ ರಸ್ತೆಗಳು ಮುಚ್ಚಿಹೋಗಿರುವ ಸಮಸ್ಯೆಯನ್ನು ಪರಿಶೀಲಿಸಿ, ರೈತರಿಗೆ ಪರ್ಯಾಯ ಸುರಕ್ಷಿತ ಮಾರ್ಗಗಳನ್ನು ಕಲ್ಪಿಸಬೇಕು. ಅಂಡರ್‌ಪಾಸ್‌ಗಳನ್ನು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವೈಜ್ಞಾನಿಕವಾಗಿ ನಿರ್ಮಿಸಬೇಕು ಎಂಬುದು ಸಮಿತಿಯ ಪ್ರಮುಖ ಬೇಡಿಕೆಯಾಗಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಯನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕಾದು ನೋಡಬೇಕಿದೆ.

ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ ಹೆದ್ದಾರಿ ಹೋಗುವ ಮಾರ್ಗದಲ್ಲಿ ನಮ್ಮ ಜಮೀನುಗಳಿವೆ. ಜಮೀನುಗಳಿಗೆ ಹೋಗಲು ನಮಗೆ ರಸ್ತೆ ಬೇಕಾಗಿದೆ. ಇಲ್ಲದಿದ್ದರೆ ಜಮೀನು ಇದ್ದು ಇಲ್ಲದಂತಾಗುತ್ತದೆ. ನಮ್ಮ ಬದುಕು ಮೂರಾಬಟ್ಟೆ ಆಗುತ್ತದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಗಳನ್ನು ಮಾಡಿದ್ದೇವೆ, ಅಲ್ಲದೆ ಸಚಿವ ಶಾಸಕರಿಗೆ ಮನವಿ ಸಹ ಸಲ್ಲಿಸಿದ್ದೇವೆ. ಕೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಶರಣಪ್ಪ ಉದ್ಬಾಳ ಹೋರಾಟ ಹೇಳಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೈತರು ಯಾವುದೇ ಅಡ್ಡಿ ಪಡಿಸಿಲ್ಲ . ಆದರೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮುಚ್ಚಿರುವ ಸ್ಥಳಗಳು ಹಾಗೂ ಅಂಡರ್‌ಪಾಸ್‌ಗಳನ್ನು ರೈತರ ಜಮೀನುಗಳಿಗೆ ಹೋಗುವ ರಸ್ತೆಗಳು ಬಂದ್ ಮಾಡಲಾಗಿದೆ ಇದರಿಂದ ಮುಂಬರುವ ದಿನಗಳಲ್ಲಿ ರೈತರಿಗೆ ಸಾಕಷ್ಟು ಸಮಸ್ಯೆ ಯಾಗಲಿದೆ ಆದ್ದರಿಂದ ನಾನು ಕೂಡ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ರೈತರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರ ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.