ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸ್ವೀಪ್ ಸಮಿತಿಯಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಿಗೆ ಹೆಚ್ಚಿನ ಮತದಾನ ಮಾಡಲು ಮತದಾನ ನಮ್ಮದು ಎನ್ನುವ ಸಂದೇಶ ನೀಡಿ ಎಂದು ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಹೇಳಿದರು.ಅವರು ಬುಧವಾರ ಬೀದರ್ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಜಿಪಂ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಕಡಿಮೆ ಮತದಾನವಾದ ಮತಗಟ್ಟೆ ವ್ಯಾಪ್ತಿಯಲ್ಲಿ ಕೆಲವು ಅಧಿಕಾರಿ ನಿಯೋಜನೆ ಮಾಡಿ, ಹೆಚ್ಚಿನ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೆಚ್ಚು ಮತದಾನವಾಗುವಂತೆ ಮಾಡಿ. ನಮ್ಮ ಮನೆ ಕಾರ್ಯಕ್ರಮ ಇದ್ದಾಗ ನಾವೇ ಹೋಗಿ ಆಮಂತ್ರಣ ಕೊಡುವುದಿಲ್ಲವೆ ಹಾಗೆ ಪ್ರಜಾಪ್ರಭುತ್ವದ ಹಬ್ಬವನ್ನು ನಮ್ಮ ಮನೆ ಕಾರ್ಯಕ್ರಮದಂತೆ ಆಚರಣೆ ಮಾಡಬೇಕು. ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಸಲ ಶೇ.75ರಷ್ಟು ಮತದಾನವಾಗುವಂತೆ ನೋಡಿಕೊಳ್ಳಬೇಕೆಂದರು.
ಬೀದರ್ ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದಿರಾ ಇನ್ನು ಕೆಲವು ದಿನ ಸಮಯ ಇರುವುದರಿಂದ ಕಡಿಮೆ ಹೆಚ್ಚಿನ ಜನರು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಹಾಗೂ ಬೇರೆ ಕಡೆ ಹೋದ ಮತದಾರರ ಹೆಸರು ಪಟ್ಟಿಮಾಡಿ ಅವರಿಗೆ ಮೇ 7ರಂದು ಬಂದು ಮತದಾನ ಮಾಡಲು ತಿಳಿಸಿ. ಮತಗಟ್ಟೆಗಳಲ್ಲಿ ಕುಡಿವ ನೀರು, ಶೌಚಾಲಯ ಸೇರಿ ಇತರೆ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಬೇಕು ವಿಶೇಷವಾಗಿ ದಿವ್ಯಾಂಗ ಮತಗಟ್ಟೆಗಳಲ್ಲಿ ಶೌಚಾಲಯಗಳು ಚೆನ್ನಾಗಿ ಇರಬೇಕು ಎಂದರು.ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಬದೋಲೆ ಮಾತನಾಡಿ, ಕಡಿಮೆ ಮತದಾನವಾದ ಮತಗಟ್ಟೆ ದತ್ತು ಪಡೆದು ಹೆಚ್ಚಿನ ಮತದಾನವಾಗುವಂತೆ ಮಾಡಬೇಕು. ಮತದಾನಕ್ಕೆ ಇನ್ನೂ 6 ದಿನ ಕಾಲಾವಕಾಶ ಇರುವುದರಿಂದ ಹೆಚ್ಚಿನ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು. ಬಿಎಲ್ಓ ಗಳೊಂದಿಗೆ ಸಭೆ ನಡೆಸಿ ವಲಸೆ ಹೋದವರನ್ನು ಸಂಪರ್ಕಿಸಿ ಅವರನ್ನು ಮತದಾನ ಮಾಡುವಂತೆ ತಿಳಿಸಿ ಹೇಳಬೇಕು ಎಂದರು.ಸಭೆ ನಡೆಸುವ ಮುನ್ನ ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರು ಈ ಹಿಂದೆ ಕಡಿಮೆ ಮತದಾನವಾದ ಬೀದರ್ ನಗರದಲ್ಲಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಗೌತಮ ಅರಳಿ ಅವರು ಜಿಲ್ಲೆಯಲ್ಲಿ ಹಮ್ಮಿಕೊಂಡ ವಿವಿಧ ಸ್ವೀಪ್ ಕಾರ್ಯಕ್ರಮದ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕರಾದ ಸಿಂಧು ಎಚ್.ಎಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಚಂದ್ರಕಾಂತ ಶಾಬಾದಕರ್, ಡಿಎಚ್‌ಒ ಡಾ.ಧ್ಯಾನೇಶ್ವರ ನೀರಗುಡೆ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೆಶಕ ಸುರೇಖಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ ಹಾಗೂ ಅಧಿಕಾರಿಗಳು ಇತರರಿದ್ದರು.