ಸಿದ್ಧಾರ್ಥ ನಗರದಲ್ಲಿ 750 ಗ್ರಾಂ ಚಿನ್ನಾಭರಣ, 15 ಕೇಜಿ ಬೆಳ್ಳಿ ಕಳವು

| Published : Jan 10 2025, 12:48 AM IST

ಸಿದ್ಧಾರ್ಥ ನಗರದಲ್ಲಿ 750 ಗ್ರಾಂ ಚಿನ್ನಾಭರಣ, 15 ಕೇಜಿ ಬೆಳ್ಳಿ ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಸಿದ್ಧಾರ್ಥ ಬಡಾವಣೆಯಲ್ಲಿ ನಿವೃತ್ತ ಪ್ರಾಂಶುಪಾಲ ಶ್ರೀನಿವಾಸಕುಮಾರ್ ಎಂಬವರ ಮನೆಯಲ್ಲಿ ಕ‍ಳವಾದ ಹಿನ್ನೆಲೆಯಲ್ಲಿ ಎಸ್ಪಿ ಡಾ.ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮನೆ ಒಡತಿ ಬೆಂಗಳೂರಿಗೆ ಶ್ರಾದ್ಧಕ್ಕೆಂದು ತೆರಳಿದ್ದ ವೇಳೆ ಖದೀಮರು ಮನೆಗೆ ಕನ್ನ ಹಾಕಿ ಲಕ್ಷಾಂತರ ರು. ನಗದು, ಅಪಾರ ಮೌಲ್ಯದ ಚಿನ್ನಾಭರಣ ಎಗರಿಸಿರುವ ಘಟನೆ ಚಾಮರಾಜನಗರದ ಸಿದ್ಧಾರ್ಥ ಬಡಾವಣೆಯಲ್ಲಿ ನಡೆದಿದೆ.ನಿವೃತ್ತ ಪ್ರಾಂಶುಪಾಲ ಶ್ರೀನಿವಾಸಕುಮಾರ್ ಎಂಬವರ ಮನೆಗೆ ಕದೀಮರು ಕನ್ನ ಹಾಕಿದ್ದು 5.5 ಲಕ್ಷ ನಗದು, 750 ಗ್ರಾಂ ಚಿನ್ನಾಭರಣ ಮತ್ತು 15 ಕೇಜಿಯಷ್ಟು ಬೆಳ್ಳಿ ಸಾಮಾನುಗಳು, ಟ್ಯಾಬ್ಲೆಟ್ ಮತ್ತು ಫೋನ್, ಸಾವಿರಾರು ಬೆಲೆಬಾಳುವ 40 ಸೀರೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಶ್ರೀನಿವಾಸಕುಮಾರ್ ಹಾಗೂ ಪತ್ನಿ ರೇಣುಕಾ ಬೆಂಗಳೂರಿಗೆ ಶ್ರಾದ್ಧ ಕಾರ್ಯಕ್ಕೆಂದು ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಬಾಗಿಲು ಮೀಟಿ ನಗದು- ಆಭರಣ ದೋಚಿದ್ದಾರೆ.

ಮನೆಯಲ್ಲಿ ಇಟ್ಟಿದ್ದ ಚಾಕೊಲೆಟ್‌ಗಳನ್ನು ತಿನ್ನುತ್ತಾ ಕಳ್ಳರು ಎಲ್ಲವನ್ನೂ ತಡಕಾಡಿ ಹಣ, ಆಭರಣ ಲಪಟಾಯಿಸಿದ್ದು 250 ಗ್ರಾಂ ಸಣ್ಣ ಒಡವೆಗಳಾದ ಮೂಗೂತಿ, ಓಲೆಗಳನ್ನು ಅಲ್ಲೇ ಬಿಟ್ಟಿದ್ದಾರೆ. ಕಳ್ಳತನ ಮಾಹಿತಿ ಮೇರೆಗೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಬುಧವಾರ ರಾತ್ರಿ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಕಳವಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಜೊತೆಗೆ, ಶ್ವಾನದಳ, ಬೆರಳಚ್ಚು ತಂಡವು ಮನೆಗೆ ಭೇಟಿ ಕೊಟ್ಟು ಕಳ್ಳರ ಜಾಡನ್ನು ಬೇಧಿಸಲು ಮುಂದಾಗಿದ್ದಾರೆ.