ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ತಗಡೂರು ಗ್ರಾಮದಲ್ಲಿ ಕಾಲರಾ ಸೋಂಕು ಉಲ್ಬಣಗೊಂಡಿದ್ದು, ಶನಿವಾರ 3 ಮಂದಿ ಸೇರಿದಂತೆ ಇದುವರೆಗೆ 76 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೆಚ್ಚಿನ ಚಿಕಿತ್ಸೆಗಾಗಿ ಮೂರು ಮಂದಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಕಲುಷಿತ ಕೊಳವೆ ಬಾವಿ ನೀರಿನ ಸೇವನೆಯಿಂದ ಕಾಲರಾ ಉಲ್ಬಣಗೊಂಡಿದೆ.ಗ್ರಾಮದಲ್ಲಿ 12 ಕೊಳವೆ ಬಾವಿಗಳಿದ್ದು, ಅದರಲ್ಲಿ ನಾಲ್ಕು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಆ ಬಾವಿಗಳಿಂದ ನೀರು ತೆಗೆದುಕೊಳ್ಳದಂತೆ ಕ್ರಮ ವಹಿಸಲಾಗಿದೆ. ತಾಪಂಯಿಂದ ಪರ್ಯಾಯವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ತಂಡ, ನುರಿತ 5 ಮಂದಿ ತಜ್ಞ ವೈದ್ಯರ ತಂಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತಗಡೂರಿನ ಸಾರ್ವಜನಿಕ ಆಸ್ಪತ್ರೆ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.ಚಿಕಿತ್ಸೆ ನೀಡಲು ಸಕಲ ಕ್ರಮ
ತಗಡೂರು ಗ್ರಾಮಕ್ಕೆ ನುರಿತ ವೈದ್ಯರ ತಂಡ ಭೇಟಿ ನೀಡಿ ಕುಡಿಯುವ ನೀರಿನ ಬಾವಿಗಳ ಪರಿಶೀಲನೆ ನಡೆಸಿದ್ದಾರೆ. ಐದು ಮಂದಿ ಆರೋಗ್ಯ ಅಧಿಕಾರಿಗಳು, ನುರಿತ ದಾದಿಯರು, ಹಿರಿಯ ವೈದ್ಯರ ತಂಡ, ಆಶಾ ಕಾರ್ಯಕರ್ತೆಯರು ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ರೋಗಿಗಳಿಗೆ ಫ್ಲ್ಯೂಯಡ್, ಪ್ರತಿರೋಧ ನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಗ್ರಾಮಗಳಲ್ಲಿ ಹಬ್ಬಗಳ ಆಚರಣೆ ಸಂದರ್ಭದಲ್ಲಿ, ಸುಚಿತ್ವವಿಲ್ಲದ ಮಾಂಸದ ಅಡುಗೆ ಸೇವನೆ ಕೂಡ ಸೋಂಕಿಗೆ ಕಾರಣವಿರಬಹುದು. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಗತ್ಯವಿದ್ದರೆ ನುರಿತ ವೈದ್ಯರು, ತುರ್ತು ಚಿಕಿತ್ಸಾ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಭಯಪಡುವ ಅಗತ್ಯವಿಲ್ಲ, ಸೋಂಕನ್ನು ನಿಯಂತ್ರಣದಲ್ಲಿಡಲು ಅಗತ್ಯ ಕ್ರಮಗಳನ್ನು ವಹಿಸಲಾಗಿದೆ, ಜಿಲ್ಲಾ ಆಸ್ಪತ್ರೆಯ ನುರಿತ ವೈದ್ಯರ ತಂಡ ಸೇವೆಯಲ್ಲಿದ್ದು, ಭಯಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯ ಅಧಿಕಾರಿ ಈಶ್ವರ್ ಕನಾಟ್ಕೆ ತಿಳಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಇಓ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.