ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರವಾಹ, ಅತಿವೃಷ್ಠಿ ಸಂಬಂಧಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು ₹767 ಕೋಟಿ ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.ಕೊಳ್ಳೇಗಾಲ ತಾಲೂಕಿನ ಪ್ರವಾಹ ಪೀಡಿತ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಮಾತನಾಡಿದರು. ಮಳೆಯಿಂದಾಗಿ ಬೆಳೆ ಹಾನಿಯೂ ಕೂಡ ಸಾಕಷ್ಟು ಆಗಿದೆ. ನಾಲ್ಕೈದು ದಿನಗಳ ಹಿಂದೆ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಆದರೆ ವಾರದಿಂದ ಈಚೆಗೆ ಇನ್ನೂ ಬೆಳೆ ಹಾನಿಯಾಗಿರುವುದು ಕಂಡು ಬಂದಿದ್ದು, ತಕ್ಷಣಕ್ಕೆ ಪರಿಹಾರದ ಕಡೆ ಗಮನ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಕುರಿತ ಪರಿಹಾರ ಕಾಮಗಾರಿಗಳಿಗಾಗಿ ₹767 ಕೋಟಿ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಬೆಳೆ ಹಾನಿ ಮತ್ತಷ್ಟು ಹೆಚ್ಚಾಗಲಿದೆ. ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ ಎಂದರು.
ರಾಜ್ಯಾದ್ಯಂತ 118 ಕಡೆ ಕಾಳಜಿ ಕೇಂದ್ರಗಳನ್ನು ತೆರೆದಿದ್ದೇವೆ. ಮಳೆಯ ಸಂದರ್ಭದಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವಲ್ಲಿ ಗುಡ್ಡದಲ್ಲಿ ಮನೆ ಮಾಡಿಕೊಂಡಿರುವವರನ್ನು ಕಾಳಜಿ ಕೇಂದ್ರಕ್ಕೆ ಕರೆತರುತ್ತಿದ್ದೇವೆ. ಕೆಲವರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ಇನ್ನೂ ಕೆಲವು ಕಡೆ ಒತ್ತಾಯ ಪೂರ್ವಕವಾಗಿ ಸ್ಥಳಾಂತರಿಸುತ್ತಿದ್ದೇವೆ. ಯಾವುದೇ ಅನಾಹುತ ಆಗುವ ಮೊದಲು ಪ್ರಾಣ ಉಳಿಸಬೇಕು. ಪ್ರಾಣ ಹೋದ ಮೇಲೆ ಪರಿಹಾರ ಕೊಡುವುದು ಮುಖ್ಯ ಅಲ್ಲ. ಒಟ್ಟು 18 ಸಾವಿರ ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ, ಊಟ ಉಪಚಾರ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.ಮಳೆಗಾಲ ಅವಧಿಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಪ್ರವಾಹ, ಮಳೆ ಸಂಬಂಧಿ ಕೆಲಸಗಳು ಹೇಗೆ ಆಗುತ್ತಿದೆ ಎಂಬುದನ್ನ ನಾನು ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ವಯನಾಡು ದುರಂತ ಆದ ಮೇಲೆ ನಾವೆಲ್ಲಾ ಬಹಳ ಎಚ್ಚರಿಕೆಯಿಂದ ಇರಬೇಕು. ಆಗಸ್ಟ್ ತಿಂಗಳಿನಲ್ಲಿಯೂ ಮಳೆ ಹೆಚ್ಚು ಬೀಳುವ ಸಾಧ್ಯತೆ ಇದೆ. ವಾಡಿಕೆ ಪ್ರಕಾರವೂ ಮಳೆಯಾಗಲಿದೆ ಎಂದರು.
ನೆರವಿಗೆ ಬರುವುದು ನಮ್ಮ ಸರ್ಕಾರದ ಕರ್ತವ್ಯ: ಮಳೆಯಿಂದ ಬಾಧಿತವಾದ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಡಳಿತವನ್ನು ಚುರುಕುಗೊಳಿಸಿ ಮಳೆ ಪ್ರವಾಹ ಸಂದರ್ಭದಲ್ಲಿ ಜನರ ನೆರವಿಗೆ ಬರುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಯಲ್ಲಿ ಸರ್ಕಾರದಿಂದ ತ್ವರಿತ ಕ್ರಮ ಕೈಗೊಳ್ಳುವಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಮಳೆ ಬೀಳುವ ಕುರಿತ ಮಾಹಿತಿಯನ್ನು ಮುಂಚಿತವಾಗಿಯೇ ನೀಡುತ್ತಿದ್ದೇವೆ. ನೀರು ಹರಿವು ಯಾವಾಗ ಹೆಚ್ಚಾಗಲಿದೆ, ಯಾವ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತದೆ. ಇದರಿಂದ ಎಷ್ಟು ಗ್ರಾಮಗಳಿಗೆ ತೊಂದರೆಯಾಗಬಹುದು ಎಂಬ ಅಂದಾಜು ಮಾಡಿಸಿ ಮೊದಲೇ ತಿಳಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೀದ್ದೇವೆ ಎಂದು ತಿಳಿಸಿದರು.ವಾಡಿಕೆಗಿಂತ ಹೆಚ್ಚು ಮಳೆ: ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಳೆ ಸಂಬಂಧಿ ಘಟನೆಯಲ್ಲಿ ಮಡಿದವರ ಸಂಖ್ಯೆ ಈ ವರ್ಷದಲ್ಲಿ ಕಡಿಮೆಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಕ್ರಿಯವಾಗಿ ಕೆಲಸ ಮಾಡಿದ್ದೇವೆ. ರಾಜ್ಯದ ನಾನಾ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜೂನ್, ಜುಲೈನಲ್ಲಿ ವಾಡಿಕೆಗಿಂತ ಶೇ. 31ರಷ್ಟು ಅಧಿಕ ಮಳೆ ಸುರಿದಿದೆ ಎಂದರು.
ಇದಕ್ಕೂ ಮೊದಲು ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರವಾಹ ಸ್ಥಿತಿ ಕುರಿತು ಸಚಿವರಿಗೆ ವಿವರಿಸಿದರು. ಈ ವೇಳೆ ಸ್ಥಳೀಯರು ತಡೆಗೋಡೆ ನಿರ್ಮಾಣ ಮಾಡಬೇಕು. ಪದೇ ಪದೇ ಪ್ರವಾಹದಿಂದ ಉಂಟಾಗುವ ಸಂಕಷ್ಟಗಳಿಗೆ ಪರಿಹಾರ ದೊರೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ ಶಾಶ್ವತ ಪರಿಹಾರ ಕ್ರಮಗಳಿಗೆ ಮುಂದಾಗುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಸಿಇಒ ಮೋನಾ ರೊತ್, ಎಸ್ಪಿ ಡಾ. ಬಿ.ಟಿ. ಕವಿತಾ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ ಇದ್ದರು.