ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ನಮ್ಮ ದೇಶ ಸುಭದ್ರವಾಗಿ, ಪ್ರಗತಿಯತ್ತ ಸಾಗಿದೆ ಎಂದರೆ ಅದಕ್ಕೆ ಭದ್ರ ಬುನಾದಿ ಹಾಕಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವಾಗಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿಯಿಂದ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನ ವಿಶ್ವದಲ್ಲೇ ಅತ್ಯಂತ ವೈಸಿಷ್ಟ್ಯಪೂರ್ಣ ಸಂವಿಧಾನ ಎನಿಸಿಕೊಂಡಿದೆ. ಸಂವಿಧಾನದ ಅಡಿಯಲ್ಲೇ ದೇಶ ಪ್ರಗತಿಯತ್ತ, ಯಶಸ್ಸಿನತ್ತ ಸಾಗಿದೆ. ಸಂವಿಧಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡ ದಿನದ ಸ್ಮರಣೆಯ ಜೊತೆಗೆ ದೇಶಕ್ಕಾಗಿ ಜೀವಬಲಿದಾನಗೈದ ಮತ್ತು ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹನೀಯರ ಸ್ಮರಣೆಯನ್ನು ನಾವು ಮಾಡಬೇಕಿದೆ ಎಂದರು.ಉಪವಿಭಾಗಾಧಿಕಾರಿ ಎಚ್.ಟಿ. ವಿಜಯಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಹನೀಯರ ಸ್ಮರಣೆ ಮತ್ತು ದೇಶದ ಭವಿಷ್ಯದ ಬಗ್ಗೆ ನಾವು ಗಮನಹರಿಸಬೇಕಿದೆ. ಮಹಿಳಾ ಸಬಲೀಕರಣ, ಆರೋಗ್ಯ ಮುಂತಾದ ವಿಷಯಗಳ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.ತಹಸೀಲ್ದಾರ್ ಜೆ. ಮಂಜುನಾಥ್, ಡಿವೈಎಸ್ಪಿ ಗೋಪಾಲಕೃಷ್ಣ, ನಗರಸಭಾಧ್ಯಕ್ಷ ಎಸ್. ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. 44ಕ್ಕೂ ಹೆಚ್ಚು ಶಾಲಾ ತಂಡಗಳು ಪಥಸಂಚಲನ ಮತ್ತು ಬ್ಯಾಂಡ್ ಸೆಟ್ ವಾದನಗಳ ಮೂಲಕ ಗಣ್ಯರಿಗೆ ಧ್ವಜವಂದನೆ ಸಲ್ಲಿಸಿದರು.ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಗಿರಿಜನ ವಿದ್ಯಾರ್ಥಿಗಳಾದ ಶಶಾಂಕ್, ಅರ್ಜುನ್, ಶಾಸ್ತ್ರಿ ವಿದ್ಯಾಸಂಸ್ಥೆಯ ಯೋಗಪಟು ಲಿಖಿತ್ ಮತ್ತು ಶ್ರೀ ರಾಮರಕ್ಷಾ ಸ್ತೋತ್ರ ಪಠನೆಯಲ್ಲಿ ಇಂಡಿಯ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ವಿ. ಪುಣ್ಯ ಅವರನ್ನು ಸನ್ಮಾನಿಸಲಾಯಿತು.ಕೃಷಿ ಇಲಾಖೆಯಿಂದ ಕಳೆದ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಐವರು ರೈತರ ಕುಟುಂಬಕ್ಕೆ ಪರಿಹಾರದ ಚೆಕ್ ನ್ನು ಶಾಸಕ ಹರೀಶ್ ಗೌಡ ವಿತರಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಪಂಪ್ ಸೆಟ್ ವಿತರಿಸಲಾಯಿತು. 29 ಮಂದಿ ಮೀನು ಕೃಷಿಕರಿಗೆ ತಲಾ 10 ಸಾವಿರ ರು. ಮೌಲ್ಯದ ಮೀನು ಸಲಕರಣೆಗಳನ್ನು ವಿತರಿಸಲಾಯಿತು.