ತಾಲೂಕಿನ ಪ್ರಮುಖ ಮತಗಟ್ಟೆ ಕೇಂದ್ರಗಳಾದ ರೋಣ, ಬೆಳವಣಕಿ ಹಾಗೂ ಹೊಳೆಆಲೂರು ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಪದವೀಧರ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ರೋಣ: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಅಂಗವಾಗಿ ತಾಲೂಕಿನಲ್ಲಿ ಶುಕ್ರವಾರ ಜರುಗಿದ ಮತದಾನ ಪ್ರಕ್ರಿಯೆ ಶಾಂತಯುತವಾಗಿದ್ದು, ಹೊಳೆಆಲೂರು, ರೋಣ, ಬೆಳವಣಕಿ ಮತಗಟ್ಟೆ ಸೇರಿ ಒಟ್ಟು ತಾಲೂಕಿನಾದ್ಯಂತ ಒಟ್ಟಾರೆ ಶೇ. 78.01ರಷ್ಟು ಮತದಾನವಾಗಿದೆ.
ತಾಲೂಕಿನ ಪ್ರಮುಖ ಮತಗಟ್ಟೆ ಕೇಂದ್ರಗಳಾದ ರೋಣ, ಬೆಳವಣಕಿ ಹಾಗೂ ಹೊಳೆಆಲೂರು ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಪದವೀಧರ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.ತಾಲೂಕಿನಲ್ಲಿ ಒಟ್ಟು 2528 ಪದವೀಧರ ಮತದಾರರ ಪೈಕಿ 1942 ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ.
ತಾಲೂಕಿನ ಬೆಳವಣಕಿ ಎಸ್.ವಿ. ಕಾಲೇಜಿನಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಒಟ್ಟು 438 ನೋಂದಾಯಿತ ಮತದಾರರ ಪೈಕಿ 264 ಪುರುಷ, 120 ಮಹಿಳಾ ಸೇರಿ ಒಟ್ಟು 366 ಮತದಾರರು ಮತ ಚಲಾಯಿಸಿದ್ದಾರೆ. ಹೊಳೆಆಲೂರು ಎಪಿಎಂಸಿಯಲ್ಲಿನ ಮತಗಟ್ಟೆಯಲ್ಲಿ ಒಟ್ಟು 774 ಮತದಾರರಲ್ಲಿ 447 ಪುರುಷ, 150 ಮಹಿಳಾ ಮತದಾರರು ಸೇರಿ ಒಟ್ಟು 597 ಮತಗಳು ಚಲಾವಣೆಗೊಂಡಿವೆ.ರೋಣದ ಪುರಸಭೆ ಸಭಾಭವನದಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 74ರಲ್ಲಿ ನೋಂದಾಯಿತ ಒಟ್ಟು 1316 ಮತದಾರರ ಪೈಕಿ 702 ಪುರುಷ, 307 ಮಹಿಳಾ ಮತದಾರರು ಸೇರಿ ಒಟ್ಟು 1009 ಮತದಾರರು ಮತ ಚಲಾಯಿಸಿದ್ದಾರೆ.
ಬೆಳಗ್ಗೆ ನಿಧಾನಗತಿಯಲ್ಲಿ ಆರಂಭಗೊಂಡ ಮತದಾನ 10 ಗಂಟೆ ಬಳಿಕ ತುರುಸಿನಿಂದ ಕೂಡಿದ್ದು, ಸಂಜೆಯವರೆಗೂ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಮತದಾನ ಮಾಡಲಾಯಿತು. ಮಹಿಳೆಯರು, ಪುರುಷರು ಪ್ರತ್ಯೇಕ ಸರದಿ ಸಾಲಲ್ಲಿ ನಿಂತು ಹಕ್ಕು ಚಲಾಯಿಸಿದರು.ಅಹಿತಕರ ಘಟನೆ ಜರುಗದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಾಲೂಕು ಆಡಳಿತ ಹಾಗೂ ಸಿಪಿಐ ವಿಜಯಕುಮಾರ, ಪಿಎಸ್ಐ ಸೋಮನಗೌಡ ಗೌಡರ ಅವರ ನೇತೃತ್ವದಲ್ಲಿ ಮತಗಟ್ಟೆ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.