ಸಾರಾಂಶ
ವಿಶ್ವಕ್ಕೆ ಅಧ್ಯಾತ್ಮದ ಬೆಳಕು ಕೊಟ್ಟಿದ್ದು ಭಾರತ. ಭಾರತದ ಆಧ್ಯಾತ್ಮಿಕತೆಗೆ ಪರ್ಯಾಯ ಯಾವುದೂ ಇಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾತಂತ್ರ್ಯ ಭಾರತ ಹಲವು ಕ್ಷೇತ್ರಗಳಲ್ಲಿ ಮಹಾನ್ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇಡೀ ವಿಶ್ವಕ್ಕೆ ಆದರ್ಶಪ್ರಾಯವಾಗಿ ಬೆಳೆದಿದೆ ಎಂದು ಪತ್ರಕರ್ತ ಎ.ಆರ್. ರಘುರಾಮ ಹೇಳಿದರು.ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಶ್ವಕ್ಕೆ ಅಧ್ಯಾತ್ಮದ ಬೆಳಕು ಕೊಟ್ಟಿದ್ದು ಭಾರತ. ಭಾರತದ ಆಧ್ಯಾತ್ಮಿಕತೆಗೆ ಪರ್ಯಾಯ ಯಾವುದೂ ಇಲ್ಲ. ಸ್ವಾತಂತ್ರ್ಯ ಪಡೆಯಲು ಶ್ರಮಿಸಿದ ಇತಿಹಾಸವನ್ನು ನಾವೆಲ್ಲರೂ ಅರಿಯಬೇಕು ಮತ್ತು ಸ್ಮರಿಸಬೇಕು. ದೇಶವನ್ನು ಮಾತೃ ಸ್ವರೂಪಿಯಾಗಿ ಪೂಜಿಸುವ, ಗೌರವಿಸುವ ದೇಶ ನಮ್ಮದು. ಅನೇಕ ಜ್ಞಾನಶಾಖೆಗಳು ವಿಶ್ವಕ್ಕೆ ತಿಳಿಯುವ ಮುನ್ನವೇ ಭಾರತದಲ್ಲಿ ಅಭಿವೃದ್ಧಿ ಹೊಂದಿ ಪ್ರಬುದ್ಧವಾಗಿ ಬೆಳೆದಿದ್ದವು ಎಂದರು.ಭಾರತದ ಜ್ಞಾನ ಸಂಪತ್ತು ಸರ್ವತೋಮುಖವಾದದ್ದು. ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕವಾಗಿದೆ. ಈ ವರ್ಷದ ಧ್ಯೇಯ ವಾಕ್ಯದಂತೆ ನಶಾ ಮುಕ್ತ ಭಾರತದತ್ತ ಹೆಜ್ಜೆ ಇಡೋಣ. ಯಾವುದೇ ರೀತಿಯ ನಶೆಗಳಿಗೂ ಅವಕಾಶ ಕೊಡಬಾರದು ಎಂದು ಅವರು ತಿಳಿಸಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ ವಂದಿಸಿದರು. ಅದಿತಿ ಹೆಗ್ಡೆ ಪ್ರಾರ್ಥಿಸಿದರು. ರಾಷ್ಟ್ರೀಯ ಹಬ್ಬಗಳ ಸಮಿತಿ ಸಂಚಾಲಕ ಲೆ.ಡಾ.ಎಲ್. ವಿನಯ್ ಕುಮಾರ್ ನಿರೂಪಿಸಿದರು.