ಕಾಫಿನಾಡಿಗೆ ಕಳೆದ ವರ್ಷ 79 ಲಕ್ಷ ಮಂದಿ ಪ್ರವಾಸಿಗರು

| Published : Feb 08 2025, 12:30 AM IST

ಸಾರಾಂಶ

ಚಿಕ್ಕಮಗಳೂರುಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಪಂಚ ನದಿಗಳ ತವರೂರಾದ ಕಾಫಿ ನಾಡು ಚಿಕ್ಕಮಗಳೂರು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹಾಗಾಗಿ ಇಲ್ಲಿಗೆ ಪ್ರವಾಸಿಗರು ಎಲ್ಲಾ ಕಾಲದಲ್ಲೂ ಬಂದು ಹೋಗುತ್ತಾರೆ.

ಗಿರಿ ಪ್ರದೇಶದ ಜತೆಗೆ ಪ್ರಸಿದ್ಧ ದೇಗುಲಕ್ಕೂ ಹರಿದು ಬರುತ್ತಿರುವ ಪ್ರವಾಸಿಗರ ದಂಡು

ಆರ್‌.ತಾರಾನಾಥ್‌ ಅಟೋಕರ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಪಂಚ ನದಿಗಳ ತವರೂರಾದ ಕಾಫಿ ನಾಡು ಚಿಕ್ಕಮಗಳೂರು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹಾಗಾಗಿ ಇಲ್ಲಿಗೆ ಪ್ರವಾಸಿಗರು ಎಲ್ಲಾ ಕಾಲದಲ್ಲೂ ಬಂದು ಹೋಗುತ್ತಾರೆ.ತುಂತುರು ಮಳೆ, ಆಕಾಶಕ್ಕೆ ಕೈ ಚಾಚಿ ಸಾಲುಗಟ್ಟಿ ನಿಂತಿರುವ ಗಿರಿ ಪ್ರದೇಶ, ತುಂಗಾ, ಭದ್ರಾ ನದಿಗಳ ತಪ್ಪಲಿನಲ್ಲಿರುವ ಮಠ, ದೇಗುಲಗಳು, ದಾರಿಯ ಉದ್ದಕ್ಕೂ ಸಿಗುವ ಕಾಫಿ ತೋಟಗಳು, ಅಲ್ಲಿ ಅರಳುವ ಹೂವುಗಳ ಪರಿಮಳ ಹೀಗೆ ಪ್ರಕೃತಿಯ ಮಡಿಲಲ್ಲಿ ಹಸಿರನ್ನೆ ಹೊದ್ದುನಿಂತಿರುವ ಪ್ರದೇಶಗಳಿಂದಾಗಿ ಎಲ್ಲಾ ಕಾಲದಲ್ಲೂ ಚಿಕ್ಕಮಗಳೂರು ನೋಡುಗರ ಕಣ್ಮನ ಸೆಳೆಯುತ್ತದೆ. ಹಾಗಾಗಿ ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂಬುದು ಜಿಲ್ಲೆಯ ಹೆಗ್ಗಳಿಕೆ.ಸರಣಿ ರಜೆಗಳು, ವಾರದ ಕೊನೆಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.ಆ ಸಂದರ್ಭಗಳಲ್ಲೆಲ್ಲಾ ಗಿರಿ ಪ್ರದೇಶದ ಹಲವೆಡೆ ಆಗಾಗ ವಾಹನಗಳಿಂದ ಟ್ರಾಫಿಕ್‌ ಜಾಮ್‌ ಕಂಡುಬರುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿಲ್ಲ. 2024ರಲ್ಲಿ 79,30,338 ಮಂದಿ ಪ್ರವಾಸಿಗರು ಜಿಲ್ಲೆಗೆ ಬಂದು ಹೋಗಿದ್ದರೆ, 2021ರಲ್ಲಿ 32,90,376 ಮಂದಿ, 2022ರಲ್ಲಿ 58 ಲಕ್ಷ, 2023 ರಲ್ಲಿ 95 ಲಕ್ಷ ಪ್ರವಾಸಿಗರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು ಎಂಬುದು ದಾಖಲಾಗಿದೆ.ಗಿರಿ ಪ್ರದೇಶ ಅಚ್ಚು ಮೆಚ್ಚು

ಜಿಲ್ಲೆಯಲ್ಲಿನ ಗಿರಿ ಪ್ರದೇಶಗಳು ಪ್ರವಾಸಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತಿವೆ. ಸೀತಾಳಯ್ಯನ ಗಿರಿ, ಮುಳ್ಳಯ್ಯನ ಗಿರಿ, ಹೊನ್ನಮ್ಮನಹಳ್ಳ, ದಬದಬೆ ಫಾಲ್ಸ್‌, ದತ್ತಪೀಠ, ಮಾಣಿಕ್ಯಧಾರ ಮಾರ್ಗದಲ್ಲಿ ಬಹಳಷ್ಟು ಪ್ರವಾಸಿಗರು ಸಂಚರಿಸುತ್ತಾರೆ. ಬೆಳ್ಳಂಬೆಳಿಗ್ಗೆ ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕಳೆದ ವರ್ಷ ದತ್ತಪೀಠಕ್ಕೆ ಸುಮಾರು 12 ಲಕ್ಷ ಮಂದಿ ಭೇಟಿ ನೀಡಿದ್ದರು. ಪುಷ್ಪಕಾಶಿ ಎಂದೇ ಖ್ಯಾತಿ ಹೊಂದಿದ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಗೆ 5 ಲಕ್ಷ ಮಂದಿ ಪ್ರವಾಸಿಗರು ಬಂದು ಹೋಗಿದ್ದಾರೆ.ಕಳೆದ ಎರಡು ವರ್ಷಗಳಿಂದ ಕೇರಳದಿಂದ ಪ್ಯಾಕೇಜ್‌ ಟೂರ್‌ನಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ. ಹಾಗೇಯೆ ತಮಿಳುನಾಡಿನಿಂದಲೂ ಬಂರುತ್ತಿದ್ದಾರೆ. ನಮ್ಮ ದೇಶದ ಪ್ರವಾಸಿಗರು ಮಾತ್ರವಲ್ಲ, 925 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಅದರಲ್ಲೂ ಅವರುಗಳು ಪ್ರಮುಖವಾಗಿ ಭೇಟಿ ನೀಡಿದ್ದು ದೇಗುಲಕ್ಕೆ ಎಂಬುದು ಮತ್ತೊಂದು ವಿಶೇಷ.

ಭಕ್ತ ಸಾಗರ:ಜಿಲ್ಲೆಯಲ್ಲಿನ ಗಿರಿ ಪ್ರದೇಶ ಮಾತ್ರವಲ್ಲ, ಮಠ, ದೇವಾಲಯಗಳಿಗೂ ಅತ್ಯಧಿಕ ಪ್ರವಾಸಿಗರು ಬಂದು ಹೋಗಿದ್ದಾರೆ. ಪ್ರವಾಸದ ಜತೆಗೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಾಪಸ್‌ ಆಗಿದ್ದಾರೆ. ಶ್ರೀ ಶಾರದಾಂಬೆ ನೆಲೆಸಿರುವ ಶೃಂಗೇರಿ ಕ್ಷೇತ್ರಕ್ಕೆ 35,37,777 ಮಂದಿ ಭಕ್ತರು ಬಂದಿದ್ದರೆ, ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ 18,00,638 ಹಾಗೂ ದಕ್ಷಿಣ ಭಾರತ ಕಾಶಿ ಎಂದೇ ಖ್ಯಾತಿ ಹೊಂದಿದ ಕಳಸದ ಶ್ರೀ ಕಳಸೇಶ್ವರ ದೇವಾಲಯದಲ್ಲಿ 7,97,922 ಮಂದಿ ಭಕ್ತರು ದರ್ಶನ ಪಡೆದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಗಿರಿ ಪ್ರದೇಶ, ಮಠಗಳಷ್ಟೆ ಇಲ್ಲಿರುವ ಹೊಯ್ಸಳರ ಕಾಲದ ದೇವಾಲಯಗಳು ಭಕ್ತರನ್ನು ಆಕರ್ಷಿಸು ತ್ತಿವೆ. ಜಿಲ್ಲೆಯಲ್ಲಿ ಸುಮಾರು 46ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಇವುಗಳ ಜತೆಗೆ ಮಳೆಗಾಲದಲ್ಲಿ ಹಲವೆಡೆ ಝರಿಗಳು ಕಂಡು ಬರುತ್ತವೆ. ಹೀಗಾಗಿ ವರ್ಷವಿಡೀ ಪ್ರವಾಸಿಗರನ್ನು ಜಿಲ್ಲೆ ಆಕರ್ಷಿಸುತ್ತದೆ.--- ಬಾಕ್ಸ್‌ ---

2024 ರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬಂದಿದ್ದ ಪ್ರವಾಸಿಗರುಶೃಂಗೇರಿ - 35,37,777ಹೊರನಾಡು - 18,00,638ಕಳಸ - 7,97,922ದತ್ತಪೀಠ - 12,55,784ಕೆಮ್ಮಣ್ಣಗುಂಡಿ - 5,38,217

---

ಪೋಟೋ ಫೈಲ್‌ ನೇಮ್‌ 7 ಕೆಸಿಕೆಎಂ 4ಮೈ ಕೊರೆಯುವ ಚಳಿಯಲ್ಲಿ ಮುಳ್ಳಯ್ಯನ ಗಿರಿಯಲ್ಲಿ ಕುರುಕಲು ತಿಂಡಿ ಸವಿಯುತ್ತಿರುವ ಪ್ರವಾಸಿಗರು.

--- 7 ಕೆಸಿಕೆಎಂ 5ಪಶ್ಚಿಮಘಟ್ಟದ ಸಾಲುಗಳಲ್ಲಿರುವ ಗಿರಿ ಪ್ರದೇಶ.