ಕನ್ನಡಪ್ರಭ ವಾರ್ತೆ ಹಳಿಯಾಳ
ಹಳಿಯಾಳ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿ ಸೇರಿ ಕಾಲಸುಂಕ ನಿರ್ಮಾಣಕ್ಕೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹797.1 ಲಕ್ಷ ಹಾಗೂ ದೇವಸ್ಥಾನಗಳಿಗೆ ಆರ್ಥಿಕ ನೆರಗಾಗಿ ₹5.15 ಲಕ್ಷ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ₹4 ಲಕ್ಷ ಮಂಜೂರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಭಾನುವಾರ ಪಟ್ಟಣದಲ್ಲಿನ ತಮ್ಮ ಗೃಹಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಾಜಕೀಯ ವಿದ್ಯಮಾನ ಹೊರತುಪಡಿಸಿ ಮಾತನಾಡಿದ ಅವರು ಹಳಿಯಾಳ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಬಿಡುಗಡೆಯಾದ ಅನುದಾನ, ಉದ್ಯಮಿ ಮಿತ್ರರ ಸಿಎಸ್ಆರ್ ಯೋಜನೆಯಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಮಳೆ-ಬೆಳೆಯ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಈವರೆಗೆ ಎರಡೂ ಬಾರಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ರಸ್ತೆ/ಸೇತುವೆ ಕಾಮಗಾರಿ:ಕೇಂದ್ರ ರಸ್ತೆ ಮೂಲಸೌಕಾರ್ಯ ನಿಧಿ ಅಡಿಯಲ್ಲಿ ₹6 ಕೋಟಿ ಮಂಜೂರಾಗಿದ್ದು, ಅದರಲ್ಲಿ ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ 10.94ಕಿಮೀ ಮರು ಡಾಂಬರೀಕರಣಕ್ಕಾಗಿ ₹4ಕೋಟಿ ಮತ್ತು ಜೋಯಿಡಾ ತಾಲೂಕಿನಲ್ಲಿ 4.37ಕಿಮೀ ಉದ್ದದ ಔರಾದ-ಸದಾಶಿವಗಡ ರಾಜ್ಯ ಹೆದ್ದಾರಿ ಮರುಡಾಂಬರಿಕರಕ್ಕಾಗಿ ₹2ಕೋಟಿ ಮಂಜುರಾಗಿದೆ. ಹಳಿಯಾಳ ಕ್ಷೇತ್ರದಲ್ಲಿ 5 ಕಾಲಸುಂಕಗಳ ನಿರ್ಮಾಣಕ್ಕಾಗಿ ₹1 ಕೋಟಿ ಮಂಜೂರಾಗಿದ್ದು, ಹಳಿಯಾಳ ತಾಲೂಕಿನ ಬಸವಳ್ಳಿ, ರಾಯಪಟ್ಟಣ, ದಾಂಡೇಲಿಯ ಬಡಾಕಾನಸಿರಡಾ, ಹರ್ನೋಡಾ ಮತ್ತು ಜೋಯಿಡಾ ತಾಲೂಕಿನ ನಾಗರಬಾವಿ ಗ್ರಾಮದಲ್ಲಿ ಕಾಲಸುಂಕ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದೆಂದರು.
ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ನಿರ್ವಹಣೆಗೆ ₹97.10 ಲಕ್ಷ ಮಂಜೂರಾಗಿದೆ, ಅದರಲ್ಲಿ ಹಳಿಯಾಳ ತಾಲೂಕಿಗೆ ₹41.56ಲಕ್ಷ, ದಾಂಡೇಲಿ ತಾಲೂಕಿಗೆ ₹8.23ಲಕ್ಷ ಹಾಗೂ ಜೋಯಿಡಾ ತಾಲೂಕಿಗೆ ₹47.31 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.
ಆರಾಧನಾ ಯೋಜನೆಯಡಿಯಲ್ಲಿ ಹಳಿಯಾಳದ ಹೊರಗಿನ ಗುತ್ತಿಗೇರಿಯ ಶ್ರೀ ಚವಾಟೆಪ್ಪಾ ದೇವಸ್ಥಾನಕ್ಕೆ ₹3.40ಲಕ್ಷ, ಜೋಯಿಡಾ ತಾಲೂಕಿನ ದೂದಗಾಳಿಯ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನಕ್ಕೆ ₹1.75ಲಕ್ಷ ಅನುದಾನ ಮಂಜೂರಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿಯಲ್ಲಿ ನೀರಿನಲ್ಲಿ ಮುಳುಗಿ ನಿಧನರಾದ ದಾಂಡೇಲಿಯ ನವಾಜ್ ಶಬ್ಬೀರ ನಾಯ್ಕ ಹಾಗೂ ಗುತ್ತಿಬೈಲಿನ ಮಹಮ್ಮದ್ ಇಸಾಕ್ ಆಯೂಬ್ ಸಾಬ್ ನಾಯ್ಕ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪಕ್ಷ ವಕ್ತಾರ ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಬಾಬು ಕಾಂಬ್ರೇಕರ ಇದ್ದರು.ಕ್ಯಾಸಲರಾಕ್-ಮಿರಜ್ ಟ್ರೈನ್ ಪುನರಾರಂಭಕೋವಿಡ್ ಕಾರಣ ಸೇರಿದಂತೆ ರೈಲು ದ್ವಿಪಥ ನಿರ್ಮಾಣ ಕಾಮಗಾರಿಯಿಂದಾಗಿ ಸ್ಥಗಿತಗೊಂಡಿದ್ದ ಕ್ಯಾಸಲರಾಕ್-ಮಿರಾಜ್ ಎಕ್ಸ್‌ಪ್ರೆಸ್ ರೈಲು ತನ್ನ ಮರು ಸಂಚಾರವನ್ನು ಆ. 15ರಿಂದ ಆರಂಭಿಸಲಿದೆ ಎಂದು ದೇಶಪಾಂಡೆ ತಿಳಿಸಿದರು. ಇದುವರೆಗೆ ಲೋಂಡಾವರೆಗೆ ಮಾತ್ರ ಸಂಚರಿಸುತ್ತಿದ್ದ ರೈಲು ಇನ್ನೂ ಕ್ಯಾಸಲರಾಕ್‌ದಿಂದ ಸಂಚರಿಸಲಿದೆ. ಈ ರೈಲು ಸಂಚಾರದಿಂದ ಈ ಭಾಗದ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.