ಸಾರಾಂಶ
ಬ್ರಹ್ಮಾವರ: ಇಲ್ಲಿನ ಜಿ.ಎಂ ಸಮೂಹ ವಿದ್ಯಾಸಂಸ್ಥೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ವೆಂಕಟೇಶ ಪ್ರಭು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಅವರು ವಿದ್ಯಾರ್ಥಿಗಳ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕೇವಲ ಸಂಭ್ರಮಕ್ಕೆ ಸೀಮಿತವಾಗಿರಬಾರದು. ದೇಶಕ್ಕಾಗಿ ಹೋರಾಡಿದ ಮಾಹಾನ್ ನಾಯಕರ, ಸೈನಿಕರ ತ್ಯಾಗವನ್ನು ಸ್ಮರಿಸಬೇಕು ಎಂದರು.ಸಮವಸ್ತ್ರವನ್ನು ಧರಿಸಿಯೇ ದೇಶ ಸೇವೆ ಮಾಡಬೇಕಿಲ್ಲ, ಪ್ರತಿಯೊಬ್ಬರೂ ದೇಶಕ್ಕಾಗಿ ಸಮಾಜಕ್ಕಾಗಿ ಕೊಡುಗೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಆನ್‌ಲೈನ್ ಗೇಮ್, ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆದು ದೇಶವನ್ನು ಕಟ್ಟಬೇಕೆಂದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಇಂದು ಭಾರತ ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆ ಮಾಡಿ ಆರ್ಥಿಕವಾಗಿ ಬಲಿಷ್ಠವಾಗಿ ಬೆಳೆಯುತ್ತಿದೆ. ಭಾರತಕ್ಕಾಗಿ ಹೋರಾಡಿದ, ಶ್ರಮಿಸಿದ ಎಲ್ಲಾ ಮಹಾನ್ ನಾಯಕರಿಗೆ ನಾವು ಗೌರವವನ್ನು ಸೂಚಿಸಬೇಕೆಂದರು.ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಜಾರ್ಜ್ ಕುರಿಯನ್ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭ ಹಾರೈಸಿದರು. ಜಿ.ಎಂ. ಗ್ಲೋಬಲ್ ಸ್ಕೂಲ್‌ನ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ ಮಾತನಾಡಿ, ಭಾರತದ ಚಂದ್ರಯಾನ ೩, ಆಪರೇಷನ್ ಸಿಂದೂರ ಕಾರ್ಯಾಚರಣೆಗಳು ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.ಶಾಲೆಯ ವಿವಿಧ ತಂಡಗಳ , ಸ್ಕೌಟ್ಸ್ ಮತ್ತು ಗೈಡ್ ಹಾಗೂ ಜಿ ಎಮ್ ಗ್ಲೋಬಲ್ ಸ್ಕೂಲ್‌ನ ವಿದ್ಯಾರ್ಥಿಗಳ ಪಥಸಂಚಲನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರಪ್ರೇಮದ ದ್ಯೋತಕವಾಗಿದ್ದವು.ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ. ಎಂ. ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ದೀಪ್ತಿ ಶೆಟ್ಟಿ, ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನುಷಾ ಸುಬ್ರಹ್ಮಣ್ಯಂ, ಉಪಾಧ್ಯಕ್ಷೆ ರೇವತಿ ಕೆ., ಶ್ರೀಮಾ ಪ್ರಣವ್ ಶೆಟ್ಟಿ, ತಾನ್ಯಾ ಶೆಟ್ಟಿ, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.