ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಜೆಎಸ್‌ಎಸ್ ಸಂಸ್ಥೆಗಳ ಸಮುಚ್ಚಯದಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.ಮೈಸೂರಿನ ನಿವೃತ್ತ ಪೊಲೀಸ್ ಅಧೀಕ್ಷಕ ಎಂ.ಪಿ. ಜಯಮಾರುತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಲ್ಲ ಜಾತಿ ಮತ ಧರ್ಮದಿಂದ ಕೂಡಿದ ಭಾರತಕ್ಕೆ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಶೌರ್ಯ, ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟಿದ್ದಾರೆ, ಸ್ವಾತಂತ್ರ್ಯವೆನ್ನುವುದು ಒಂದು ಮಾಣಿಕ್ಯದಂತೆ, ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು, ಭಾರತ ಜಗತ್ತಿನಾದ್ಯಂತ ಸರ್ವ ಶ್ರೇಷ್ಠ ಸಂಪನ್ನತೆ ಹಾಗೂ ಸರ್ವಧರ್ಮ ಸಾಮರಸ್ಯದಿಂದ ಕೂಡಿದ ದೇಶವಾಗಿದೆ. ಮಾಹಿತಿ ತಂತ್ರ್ಯಜ್ಞಾನ ಇಂದು ಜಗತ್ತಿನಲ್ಲಿ ಪ್ರಭಾವ ಬೀರುತ್ತಿದ್ದು, ಸಾಮಾಜಿಕ ಮಾಧ್ಯಮಗಳ ದುಷ್ಪರಿಣಾಮಗಳನ್ನು ಅರಿತು ಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳೇ ದೇಶದ ಭವಿಷ್ಯ, ನಮ್ಮ ರಾಷ್ಟ್ರದ ಬೆಳವಣಿಗೆಗೆ ಮತ್ತು ಉನ್ನತಿಗೆ ಮಕ್ಕಳ ಪಾತ್ರ ಬಹುಮುಖ್ಯವಾದುದು ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ಈ ಶಾಲೆಯಲ್ಲಿ ಪೂರ್ವೋತ್ತರ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ದೇಶದ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ, ಜಗತ್ತು ನಿದ್ರಿಸುತ್ತಿರುವಾಗ ಸ್ವಾತಂತ್ರ್ಯ ಪಡೆದ ನಾವು ಬ್ರಿಟೀಷರ ಎರಡು ನೂರು ವರ್ಷಗಳ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಪಡೆದು ಇಂದಿಗೆ 79 ವರ್ಷಗಳಾಗಿವೆ, ಈ ಕಾಲಮಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತ ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಷಯ, ಶಿಕ್ಷಣದ ಕ್ರಾಂತಿಯಾಗದಿದ್ದರೆ ಆರ್ಥಿಕ, ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಅರಿತು ಸ್ವಯಂಸೇವಾ ಸಂಸ್ಥೆಗಳು ಸರ್ಕಾರದ ಜೊತೆಗೆ ಒಗ್ಗೂಡಿ ಸೇವೆ ಸಲ್ಲಿಸುತ್ತಿವೆ. ಯುವ ಶಕ್ತಿ ಭಾರತದ ದೊಡ್ಡ ಶಕ್ತಿ. ಈ ಶಕ್ತಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸದೃಢ ಭಾರತ ನಿರ್ಮಾಣ ಮಾಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.ಜೆಎಸ್‌ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಜಿ.ಎಲ್. ತ್ರಿಪುರಾಂತಕ, ವೀರಭದ್ರಯ್ಯ, ಡಾ.ಎಚ್.ಎಂ. ಮಹೇಶ್, ಎಂ. ರಾಜಶೇಖರಮೂರ್ತಿ, ಜಿ. ಶಿವಮಲ್ಲು, ಎಂ.ಜಿ. ಬಸವಣ್ಣ, ಜಿ.ಎಂ.ಷಡಕ್ಷರಿ, ಜಿ.ಶಿವಸ್ವಾಮಿ, ಮಹದೇವಪ್ರಸಾದ್, ಸುಶೀಲಾ ಇದ್ದರು.
ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ವಿದ್ಯಾರ್ಥಿಗಳು ಭಾಷಣ ಮಾಡಿದರು. ಶಾಲೆಯ ಎನ್‌ಸಿಸಿ ವಾಯುದಳ, ಭೂದಳ, ಸ್ಕೌಟ್ ಮತ್ತು ಗೈಡ್ಸ್, ಬ್ಯಾಂಡ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೈನವಿರೇಳಿಸುವ ಮಲ್ಲಕಂಬ ಪ್ರದರ್ಶನ ನಡೆಯಿತು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಮ.ಗು. ಬಸವಣ್ಣ ಸ್ವಾಗತಿಸಿದರು. ಎಸ್. ಪಲ್ಲವಿ ವಂದಿಸಿದರು. ಕೆ.ಎಂ. ಬಿಂದು ನಿರೂಪಿಸಿದರು.