ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ಸಹಭೋಜನದೊಂದಿಗೆ ಭಾನುವಾರ ಸಂಪನ್ನಗೊಂಡಿತು.ಸಂತ ಸೆಬಾಸ್ಟಿನ್ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು. ಜ.24ರಂದು ಸಂಜೆ 4.30ಕ್ಕೆ ದೇವಾಲಯದ ಧರ್ಮಗುರು ಸೆಬಾಸ್ಟೀನ್ ಪೂವತ್ತಿಗಲ್ ಧ್ವಜಾರೋಹಣ ನೆರವೇರಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಹಬ್ಬದ ಅಂಗವಾಗಿ ದಿವ್ಯ ಬಲಿಪೂಜೆ ಹಾಗೂ ಭಕ್ತರ ಸಂಬಂಧಿಕರ ಸಮಾಧಿ ಸಂದರ್ಶನ, ಮೃತರಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು.
ಜ.25ರಂದು ಸಂಜೆ ದಿವ್ಯ ಬಲಿಪೂಜೆ, ಪರಮಪ್ರಸಾದದ ವಿತರಣೆ ಹಾಗೂ ವಾಹನಗಳ ಪೂಜೆಯನ್ನು ಮೈಸೂರು ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲ ಜಿಂಟೋ ಇಂಜಿಕಾಲಾಯಿಲ್ ನೆರವೇರಿಸಿದರು.ಜ.26ರಂದು ಸಂಜೆ ತಲಶ್ಶೇರಿಯ ಮಹಾಧರ್ಮ ಪ್ರಾಂತ್ಯದ ಜಿತಿನ್ ವಯಲಿಂಗಲ್ ಮಡಿಕೇರಿ ವಲಯ ಧರ್ಮಗುರುಗಳಾದ ದೀಪಕ್ ಜಾರ್ಜ್, ಕುಶಾಲನಗರದ ಮಾರ್ಟಿನ್, ಸುಂಟಿಕೊಪ್ಪ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ವಿಜಯ ಕುಮಾರ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರು ಅವಿನಾಶ್, ಸಿದ್ದಾಪುರ, ಗೋಣಿಕೊಪ್ಪ ಭಾಗಗಳಿಂದ ವಿವಿಧ ಧರ್ಮಕೇಂದ್ರದ 15ಕ್ಕೂ ಮಿಕ್ಕಿ ಧರ್ಮಗುರು ಹಬ್ಬದ ವಿಧಾನ ಪೂರ್ವಕ ಆಡಂಬರ ದಿವ್ಯ ಬಲಿಪೂಜೆಯನ್ನು ಸರ್ಮಪಿಸಿದರು.
ನಂತರ ವಿದ್ಯುತ್ ದೀಪಾಲಂಕೃತ ತೇರಿನಲ್ಲಿ ಸಂತ ಸೆಬಾಸ್ಟೀನ್ ಅವರ ಸ್ವರೂಪ ಇರಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೈಸ್ತ ಬಾಂಧವರು ಮೊಂಬತ್ತಿ ಹಿಡಿದು ಪ್ರಾರ್ಥನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ರಾತ್ರಿ ಸ್ನೇಹ ಭೋಜನ, ಹರಕೆ ಹರಾಜು ಪ್ರಕ್ರಿಯೆ ನಡೆಯಿತು.ವಾರ್ಷಿಕೋತ್ಸವದಲ್ಲಿ ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಸೋಮವಾರಪೇಟೆ, ಸಿದ್ದಾಪುರ, ಗೋಣಿಕೊಪ್ಪ ಭಾಗಗಳಿಂದ ಕನ್ಯಾಸ್ತ್ರೀಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ ಭಕ್ತರು ಪಾಲ್ಗೊಂಡಿದ್ದರು.