ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪು ಮತ್ತು ಗಯಟೆ ಅವರು ತಮ್ಮ ಸಾಹಿತ್ಯದಲ್ಲಿ ಪ್ರಕೃತಿಯ ವೈವಿದ್ಯಮಯತೆಯನ್ನು ಮೆರೆದಿದ್ದಾರೆ ಎಂದು ಸಾಹಿತಿ ಪ್ರೊ.ಸಿ. ನಾಗಣ್ಣ ತಿಳಿಸಿದರು.ರಾಮಕೃಷ್ಣನಗರದ ರಾಮಕೃಷ್ಣ ಪರಮಹಂಸ ಮಂಟಪದಲ್ಲಿ ಶ್ರೀರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನವು ಆಯೋಜಿಸಿದ್ದ 7ನೇ ತಿಂಗಳ ತಿಳಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಕುವೆಂಪು ಮತ್ತು ಜರ್ಮನಿಯ ಸಾಹಿತಿ ಗಯಟೆ ಅವರ ಜೀವಯಾನ ಸಂದೇಶ ಕುರಿತು ಉಪನ್ಯಾಸ ನೀಡಿದ ಅವರು, ಇಬ್ಬರು ಸಾಹಿತಿಯಲ್ಲಿದ್ದ ಸಮಾನ ಸಾಹಿತ್ಯಾತ್ಮಕ ತತ್ವಗಳ ಆದರ್ಶಗಳನ್ನು ವಿವರಿಸಿದರು.
ಕುವೆಂಪುರವರು ಮಲೆನಾಡಿನಲ್ಲಿ ಹುಟ್ಟಿ ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಕನ್ನಡ ಸಾಹಿತ್ಯವನ್ನು 20ನೇ ಶತಮಾನದಲ್ಲಿ ಶ್ರೀಮಂತಗೊಳಿಸಿದರೆ, ಗಯಟೆಯವರು 17ನೇ ಶತಮಾನದಲ್ಲಿ ಜರ್ಮನಿಯಲ್ಲಿ ಹುಟ್ಟಿ ಅಲ್ಲಿಯೆ ಹಲವಾರು ಕಡೆ ಓಡಾಡಿ 130 ಹೆಚ್ಚು ಕೃತಿಗಳನ್ನು ಇಂಗ್ಲಿಷಿನಲ್ಲಿ ಬರೆದರು. ಇವರಿಬ್ಬರಿಗೂ ದೈವತ್ವ ಮತು ಆಧ್ಯಾತ್ಮದಲ್ಲಿ ನಂಬಿಕೆ ಇರುವ ಸಾಮ್ಯತೆಯನ್ನು ಅವರ ಸಾಹಿತ್ಯದಿಂದ ಗುರುತಿಸಬಹುದಾಗಿದೆ ಎಂದರು.ಜರ್ಮನಿಯ ರಾಜ ಗಯಟೆಯವರ ವಿದ್ವತ್ತನ್ನು ಮತ್ತು ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಅವರ 25ನೇ ವಯಸ್ಸಿನಲ್ಲಿಯೇ ತನ್ನ ಮಂತ್ರಿ ಮಂಡಲದಲ್ಲಿ ಇರಿಸಿಕೊಂಡು ಹಲವಾರು ಖಾತೆಗಳನ್ನು ನೀಡಿ, ಅವರು ಕಂಡ ಕನಸುಗಳನ್ನು ನನಸಾಗಿಸುವ ಅವಕಾಶವನ್ನು ಮಾಡಿಕೊಟ್ಟಿದ್ದು, ಇಂದು ಆಡಳಿತ ನಡೆಸುವವರಿಗೆ ಆದರ್ಶಪ್ರಾಯ ಎಂದು ಅವರು ಹೇಳಿದರು.
ಹಾಗೆಯೆ ಅಂದಿನ ರಾಜಕೀಯ ವ್ಯವಸ್ಥೆ ಕುವೆಂಪು ಅವರಿಗೂ ಕುಲಪತಿಗಳನ್ನಾಗಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದನ್ನು ಸ್ಮರಿಸಿ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಈ ಬಗೆಯ ನಿದರ್ಶನಗಳು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.ನಂತರ ವಿದ್ವಾನ್ ಮಾನಸ ನಯನ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಷ್ಠಾನದ ಅಧ್ಯಕ್ಷ ಡಿ. ಮಾದೇಗೌಡ, ಕಾರ್ಯಾಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಕಾರ್ಯದರ್ಶಿ ಕೆಂಪಲಿಂಗರಾಜು, ಖಜಾಂಚಿ ಬಸವಲಿಂಗಪ್ಪ, ಉಪಾದ್ಯಕ್ಷ ಬಸವಣ್ಣ ಇದ್ದರು. ಪ್ರೊ.ಬಿ. ಚಂದ್ರಶೇಖರ್ ಸ್ವಾಗತಿಸಿದರು. ರಶ್ಮಿ ವಂದಿಸಿದರು.