ಕಡಲೆಕಾಯಿ ಪರಿಷೆಗೆ 8.50 ಲಕ್ಷ ಜನ ಭೇಟಿ

| Published : Nov 21 2025, 04:00 AM IST

ಸಾರಾಂಶ

ಸಚಿವ ರಾಮಲಿಂಗಾರೆಡ್ಡಿ ಅವರು ಪರಿಷೆಯ ಸ್ಥಳದಲ್ಲಿದ್ದು ಮೇಲ್ವಿಚಾರಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯ ನಾಲ್ಕು ದಿನಗಳಲ್ಲಿ ಬರೋಬ್ಬರಿ 8.50ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ. ಇಂದು ಪರಿಷೆಯ ಕೊನೆ ದಿನವಾಗಿದ್ದು, ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದೆ.

ಪರಿಷೆ ಪ್ರಯುಕ್ತ ಗುರುವಾರ ಸಂಜೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ದೊಡ್ಡಗಣಪತಿ ದೇವಸ್ಥಾನದಲ್ಲಿದ್ದು ಸ್ವತಃ ಕೆಲಹೊತ್ತು ಜನಜಂಗುಳಿ ನಿರ್ವಹಿಸಿದರು. ಸಂಜೆಯಿಂದ ಅವರು ದೇವಸ್ಥಾನದಲ್ಲಿದ್ದು ನಾಲ್ಕು ದಿನಗಳ ಮಾಹಿತಿಯನ್ನು ದೇವಸ್ಥಾನ ಸಿಬ್ಬಂದಿ, ಆಡಳಿತಾಧಿಕಾರಿಗಳಿಂದ ಪಡೆದರು. ಜತೆಗೆ ಕೊನೆ ದಿನವಾದ ಶುಕ್ರವಾರ ತೆಗೆದುಕೊಳ್ಳಬೇಕಾದ ಕ್ರಮವನ್ನು ಸೂಚಿಸಿದರು.

ಇನ್ನು ಬಸವನಗುಡಿಯ ನಾರ್ತ್ ರೋಡ್, ಕೆ.ಆರ್. ರಸ್ತೆ, ಆಶ್ರಮ ವೃತ್ತ, ಡಿವಿಜಿ ರಸ್ತೆ, ಗಾಂಧಿ ಬಜಾರ್ ಮುಖ್ಯ ರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್ ರಸ್ತೆ, ಎನ್‌.ಆರ್. ಕಾಲೋನಿಯಲ್ಲಿ ಜನ ಕಿಕ್ಕಿರಿದು ಸೇರುತ್ತಿದ್ದಾರೆ. ಬುಧವಾರ ಸುಮಾರು 2ಲಕ್ಷಕ್ಕೂ ಅಧಿಕ ಭಕ್ತಾದಿಗಳು ಕಡಲೆಕಾಯಿ ಪರಿಷೆಯನ್ನು ಆನಂದಿಸಿದರು. ವಿಶೇಷ ದೀಪಾಲಂಕಾರ, ಹೂವಿನ ಅಲಂಕಾರ ವೀಕ್ಷಿಸಲು ಜನ ಹೆಚ್ಚಾಗಿ ಬರುತ್ತಿದ್ದಾರೆ.

ಪ್ರತಿ ವರ್ಷ ಕೇವಲ 200 ಮಳಿಗೆಗಳು ಮಾತ್ರ ಬರುತ್ತಿದ್ದವು. ಈ ಬಾರಿ 450ಕ್ಕೂ ಹೆಚ್ಚು ಮಳಿಗೆಗಳು ಇದ್ದು ಕಡಲೆ, ಗೃಹೋಪಯೋಗಿ, ಬಟ್ಟೆ, ಪಾತ್ರೆ, ಮಕ್ಕಳ ಆಟಿಕೆ, ಹಣ್ಣುಹಂಪಲು, ಕುರುಕಲು ತಿಂಡಿ ಮಳಿಗೆಗಳಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಜತೆಗೆ ಮಳಿಗೆಗಳಿಂದ ಸುಂಕ ತೆಗೆದುಕೊಳ್ಳುವುದನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ವರ್ತಕರು ಖುಷಿಯಾಗಿದ್ದಾರೆ. ಪ್ಲಾಸ್ಟಿಕ್‌ ನಿರ್ಬಂಧ ಇರುವುದರಿಂದ ಬಿಎಂಎಸ್‌ ಕಾಲೇಜು ಸೇರಿ ವಿವಿಧ ಸ್ವಯಂ ಸೇವಾ ಸಂಘಟನೆಗಳು ಪೇಪರ್‌, ಬಟ್ಟೆ ಬ್ಯಾಗನ್ನು ವರ್ತಕರಿಗೆ ವಿತರಿಸುತ್ತಿವೆ.ಬುಲ್ ಟೆಂಪಲ್ ರೋಡ್ ಮುಖ್ಯ ರಸ್ತೆಯಲ್ಲಿ ಭದ್ರತೆಗೆ 800ಕ್ಕೂ ಹೆಚ್ಚು ಪೊಲೀಸ್ ನಿಯೋಜಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯಿದೆ.