ಜಿಲ್ಲೆಯಲ್ಲಿ 8,80,630 ಅಂತಿಮ ಮತದಾರರು

| Published : Jan 07 2025, 12:15 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಅಂತಿಮ ಮತದಾರರ ಪಟ್ಟಿ ಪ್ರಚುರ ಪಡಿಸುವ ಸಲುವಾಗಿ ವರ್ಚುವೆಲ್ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಅವರ ಸಮ್ಮುಖದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 8,80,630 ಮತದಾರರಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಅಂತಿಮ ಮತದಾರರ ಪಟ್ಟಿ ಪ್ರಚುರ ಪಡಿಸುವ ಸಲುವಾಗಿ ವರ್ಚುವೆಲ್ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕ ಮೇಜರ್ ಪಿ.ಮಣಿವಣ್ಣನ್ ಅವರ ಸಮ್ಮುಖದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿ ವಿವರ ನೀಡಿದರು.

ದಿ.1-1-2025ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,78,895 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 8,80,630 ಮತದಾರರಿದ್ದಾರೆ. ಪರಿಷ್ಕರಣಾ ಅವಧಿಯಲ್ಲಿ ಒಟ್ಟು 4,801 ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 3,066 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಒಟ್ಟಾರೆ ಕರಡು ಮತದಾರರ ಪಟ್ಟಿ ಪ್ರಕಟಿತ ದಿನಾಂಕದಿಂದ ಈವರೆಗೆ 1,735 ಮತದಾರರು ಹೆಚ್ಚುವರಿಯಾಗಿ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ 2,24,660 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 2,24,809 ಮತದಾರರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ 2,20,177 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 2,20,486 ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ 2,17,001 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 2,17,638 ಮತದಾರರಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ 2,17,057 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 2,17697 ಮತದಾರರಿದ್ದಾರೆ.ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 254 ಮತಗಟ್ಟೆಗಳು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 241, ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 239, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 249 ಮತಗಟ್ಟೆಗಳು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 983 ಮತಗಟ್ಟೆಗಳಿವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿದ್ದಂತೆ ಒಟ್ಟು 8,410 ಯುವ ಮತದಾರರಿದ್ದು, ಹೊಸದಾಗಿ 1,850 ಯುವ ಮತದಾರರು ಸೇರ್ಪಡೆಗೊಂಡಿದ್ದು ಒಟ್ಟಾರೆ ಅಂತಿಮ ಮತದಾರರ ಪಟ್ಟಿಯಲ್ಲಿ 10,260 ಯುವ ಮತದಾರರು ನೋದಣಿಯಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಮತದಾರರು ಮತ್ತು 18 ಹಾಗೂ ಇದರ ಮೇಲ್ಪಟ್ಟ ಯುವ ಮತದಾರರ ಹೆಸರನ್ನು ನಿರಂತರ ಪರಿಷ್ಕರಣೆ ಅವಧಿಯಲ್ಲಿ ಅರ್ಜಿ ಪಡೆದು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಮಾತನಾಡಿ, ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಪ್ರಚುರ ಪಡಿಸಲಾಗಿರುವ ಅಂತಿಮ ಮತದಾರರ ಪಟ್ಟಿಯ ಕುರಿತು ಯಾವುದೇ ಆಕ್ಷೇಪಣೆಗಳಿದ್ದರೂ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆ ಸಂಪರ್ಕಿಸಬೇಕು. ಅಂತರ್ಜಾಲ ಸಂಪರ್ಕ ವ್ಯವಸ್ಥೆ ಇಲ್ಲದಿರುವ ಕೆಲವು ಮತಗಟ್ಟೆಗಳಿಗೆ ಅಂತರ್ಜಾಲ ಕಲ್ಪಿಸುವ ಕೆಲಸವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಇಂದು ಹೊರಡಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಕೈಬಿಟ್ಟು ಹೋಗಿದ್ದಲ್ಲಿ, ನಿಧನ ಹೊಂದಿದ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿರುವುದು ಕಂಡುಬಂದಲ್ಲಿ ಈ ಮಾಹಿತಿಯನ್ನು ಆಯಾ ತಾಲೂಕು ತಹಸೀಲ್ದಾರ್ ಕಚೇರಿಗೆ ನೀಡಬೇಕು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಯಾರೇ ಅರ್ಹರು ಮತದಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ ಶೇ.100ರಷ್ಟು ದೋಷ ರಹಿತ ಮತದಾರರ ಪಟ್ಟಿ ತಯಾರಿಸಲು ಮತ್ತು ಮತದಾನದ ಶೇಕಡವಾರು ಪ್ರಮಾಣವನ್ನು ಹೆಚ್ಚಿಸಲು ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆಯಾಗಿದ್ದು ಟೋಲ್ ಫ್ರೀ ಸಂಖ್ಯೆ 1950 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಆಯಾ ತಾಲೂಕು ತಹಸೀಲ್ದಾರ್ ಕಚೇರಿಗಳಲ್ಲಿ ಸಹಾಯವಾಣಿ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಡೀಸಿ ಮತದಾರರ ಪಟ್ಟಿ ವಿತರಿಸಿದರು. ಜಿಪಂ ಸಿಇಒ ಮೋನಾ ರೋತ್, ಎಡಿಸಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್‌ರಾದ ಬಿ. ಗಿರಿಜ, ಐ.ಈ.ಬಸವರಾಜು, ಆರ್.ಜಯಪ್ರಕಾಶ್, ವೈ.ಕೆ.ಗುರುಪ್ರಸಾದ್, ಚುನಾವಣಾ ಶಿರಸ್ತೇದಾರ್ ಬಸವರಾಜು, ಪ್ರಕಾಶ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಹೆಚ್.ನಸ್ರುಲ್ಲಾ ಖಾನ್, ಪಿ.ವೃಷಬೇಂದ್ರಪ್ಪ, ಎನ್.ನಾಗಯ್ಯ, ಮಹದೇವಪ್ರಸಾದ್, ಹರೀಶ್ ಇದ್ದರು.