ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಲೆಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಚುನಾವಣಾ ರಾಯಭಾರಿಗಳನ್ನಾಗಿ ಗುರುತಿಸಲಾಗಿದೆ. ರಾಯಭಾರಿಗಳು ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ಮನವಿ ಮಾಡಿಕೊಂಡರು. ನಗರದ ಗ್ರಂಥಾಲಯ ಸಭಾಂಗಣದಲ್ಲಿ ಕರ್ಮಿ ಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎಸ್.ವಿ.ಸ್ವಾಮಿ, ಮಂಗಳಮ್ಮ, ರಾಷ್ಟ್ರಮಟ್ಟದ ಕ್ರೀಡಾ ಪಟು ಕುಮಾರಿ ಸನಿಕಾ ಸುಲ್ತಾನ, ಅಥ್ಲೆಟಿಕ್ ಆಟಗಾರರಾದ ಕ್ರಿಶಿಕ್ , ಗಾಯಕರಾದ ಕಂಬದ ರಂಗಯ್ಯ, ಹರಿಕಥೆ ಮತ್ತು ಕರ್ತುನಕಾರರಾದ ಲಕ್ಷ್ಮಣ ದಾಸ್ ಅವರನ್ನು ಅಭಿನಂದಿಸಲಾಯಿತು.ಭಾರತ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವುದು ನಮ್ಮ ನಿಮ್ಮೆಲ್ಲರ ಭಾಗ್ಯ ಮತ್ತು ಹೆಮ್ಮೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಜಿಲ್ಲೆಯಲ್ಲಿ ಈಗಾಗಲೇ ಒಂದುವರೆ ಲಕ್ಷ ಮಕ್ಕಳು ತಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸಿದ್ದಾರೆ. ಚುನಾವಣಾ ರಾಯಭಾರಿಗಳನ್ನು ಆಯ್ಕೆ ಮಾಡಿದ್ದು ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುವ ಸಮಯದಲ್ಲಿ ರಾಯಭಾರಿಗಳನ್ನು ಆಹ್ವಾನಿಸಿ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ರಾಯಭಾರಿಗಳಾಗಿ ಆಯ್ಕೆಯಾಗಿರುವ ಎಲ್ಲಾ ಸಾಧಕರಿಗೂ ಅಭಿನಂದನೆಗಳು ಎಂದರು.ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಉದ್ಘಾಟಿಸಿ ರಾಯಭಾರಿಗಳನ್ನು ಅಭಿನಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತುಮಕೂರು ಮಹಾನಗರ ಪಾಲಿಕೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾರ್ಮಿ ಕರಿಂದ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳ ಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಟೋ ಚಾಲಕರು ಸಾತ್ ನೀಡಿರುವುದು ವಿಶೇಷವಾಗಿತ್ತು.ಮತದಾನ ಜಾಗೃತಿ ಅಭಿಯಾನದಲ್ಲಿ ಕೃಷಿ ಉಪ ನಿರ್ದೇಶಕ ಅಶೋಕ್, ರೇಷ್ಮೆ ಉಪ ನಿರ್ದೇಶಕರಾದ ಬಾಲಕೃಷ್ಣಪ್ಪ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ತೇಜಾವತಿ ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಭಾಗಿಯಾಗಿದ್ದರು.