ಕಾರ್ಯಕರ್ತರು ಪ್ರಾಧಿಕಾರದ ಒಳಗೆ ನುಗ್ಗಲು ಯತ್ನಿಸಿದಾಗ ಕಾರ್ಯಕರ್ತರು ಹಾಗೂ ಪೋಲಿಸರ ಮಧ್ಯ ತಳ್ಳಾಟ, ನೂಕಾಟ ಮಾತಿನ ಚಕಮಕಿ ಸಹ ತಾರಕ್ಕೇರಿತ್ತು.

ಕೊಪ್ಪಳ: ನಗರದ ಬಸವೇಶ್ವರ ವೃತ್ತದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿವರೆಗೆ ಭೀಕ್ಷೆ ಬೇಡುವುದರ ಮೂಲಕ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದವರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ವಂಚನೆ ಹಾಗೂ ಭ್ರಷ್ಟಾಚಾರದ ಮತ್ತು ಪ್ರಕರಣದ ಆರೋಪಿಯ ಬಂಧನ ಆಗಲಿ ಎಂದು ಪ್ರತಿಭಟಿಸಿದರು.

ನಗರದ ಬಸವೇಶ್ವರ ವೃತ್ತದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿವರೆಗೆ ಭೀಕ್ಷೆ ಬೇಡುತ್ತಾ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳಿಗೆ ಭ್ರಷ್ಟ ರಾಜಕಾರಣಿಗಳಿಗೆ ಹಣ ಸಂಗ್ರಹಿಸಲಾಗುತ್ತದೆ ಎಂಬ ಪ್ರತಿಭಟನಾ ಮೆರವಣಿಗೆ ಸಾಗಿತು. ಸಂಘಟನೆಯ ಕಾರ್ಯಕರ್ತರು ಪ್ರಾಧಿಕಾರದ ಒಳಗೆ ನುಗ್ಗಲು ಯತ್ನಿಸಿದಾಗ ಕಾರ್ಯಕರ್ತರು ಹಾಗೂ ಪೋಲಿಸರ ಮಧ್ಯ ತಳ್ಳಾಟ, ನೂಕಾಟ ಮಾತಿನ ಚಕಮಕಿ ಸಹ ತಾರಕ್ಕೇರಿತ್ತು.

ಜಿಲ್ಲೆ ಎಂದರೆ ಭ್ರಷ್ಟ ಅಧಿಕಾರಿಗಳ ತಾಣವಾಗಿದೆ. ಕೆಲವು ಭ್ರಷ್ಟ ಅಧಿಕಾರಿಗಳು ಬಹಳ ವರ್ಷದಿಂದ ಇಲ್ಲೇ ವಾಸವಾಗಿದ್ದು, ರತ್ನಗಂಬಳಿ ಹಾಸಿಕೊಂಡು ಠಿಕಾಣಿ ಹೂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಬಂದರೂ ಕೂಡಾ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಬಂದ ಅನುದಾನ ಭ್ರಷ್ಟ ಅಧಿಕಾರಿಗಳ, ಭ್ರಷ್ಟ ರಾಜಕಾರಣಿಗಳ ಜೇಬು ಸೇರುತ್ತಿದೆ. ಕೊಪ್ಪಳ ಜಿಲ್ಲಾ ಕೇಂದ್ರ ಭ್ರಷ್ಟ ಅಧಿಕಾರಿಗಳಿಗೆ ಸ್ವರ್ಗ ಇದ್ದಂತೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹8 ಕೋಟಿಗೂ ಅಧಿಕ ಹಣ ವಂಚನೆಯಾಗಿದ್ದು ವಂಚನೆಯ ಪ್ರಕರಣವು ಕೊಪ್ಪಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ ವಂಚನೆಯ ಆರೋಪಿ ರವೀಂದ್ರಕುಮಾರನನ್ನು ಬಂಧಿಸಿಲ್ಲ. ಈ ಕೂಡಲೇ ಇತನನ್ನು ಬಂಧಿಸಬೇಕು. ರವೀಂದ್ರಕುಮಾರ ಇತನು ಹೊರಗುತ್ತಿಗೆ ನೌಕರ ಈ ಹಿಂದೆ ಸರೋಜಮ್ಮ ಬಡಾವಣೆಯಲ್ಲಿ ನಿವೇಶನ ಕೊಡಿಸುವೆ ಅಂತ ಹೇಳಿ ಜನರಿಂದ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

ಈ ವಂಚನೆ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿ, ಆಯುಕ್ತರು ಹಾಗೂ ಬ್ಯಾಂಕ್ ಸಿಬ್ಬಂದಿ ಮತ್ತು ಹಲವರು ಶ್ಯಾಮಿಲಾಗಿದ್ದು ಸಮಗ್ರ ತನಿಖೆಯಿಂದ ಬಯಲಿಗೆ ಬರಬೇಕಾಗಿದೆ. ಒಟ್ಟು ಎಷ್ಟು ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಸಮಗ್ರ ತನಿಖೆಯಿಂದ ಗೊತ್ತಾಗಬೇಕಿದೆ. ರವೀಂದ್ರಕುಮಾರನ ಪತ್ನಿ ಹಾಗೂ ಸಹೋದರ ಹಾಗೂ ಆ ಅವಧಿಯ ಆಯುಕ್ತರ ಖಾತೆಗೂ ಹಣ ಜಮಾವಣೆಯಾಗಿದ್ದು ಇವರೆಲ್ಲರ ತನಿಖೆಯೂ ಕೂಡಾ ಅಗತ್ಯವಿದೆ. ಈ ವಂಚನೆಗೆ ಒಳಗಾಗಿರುವ ಪ್ರತಿಯೊಬ್ಬ ಅರ್ಜಿದಾರರಿಗೆ ನಿವೇಶನ ಅಥವಾ ಹಣ ಮರಳಿ ನೀಡಬೇಕು. ಈ ಎಲ್ಲ ಬೇಡಿಕೆ ಈಡೇರಿಸದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ತಾಲೂಕಾಧ್ಯಕ್ಷ ಮಹೇಶ ಅಲ್ಲಾನಗರ, ಗೌರವಾಧ್ಯಕ್ಷ ಜಿ.ಎಸ್.ಗೋನಾಳ, ರಾಜಾ ಹುಸೇನ, ಶಿವಕುಮಾರ ಏಣಗಿ, ಹನುಮಗೌಡ, ನಾಗರಾಜ ನೀಲಗಿರಿ, ಮಾರುತಿ ಬನ್ನಿಕೊಪ್ಪ, ಪ್ರವೀಣ ಗೌಡ, ಆನಂದ ಮಡಿವಾಳರ, ಶಕೀಲ್ ಅಹ್ಮದ, ಪತ್ರಯ್ಯ ಹೀರೆಮಠ, ಶಿವು ನೀಲಗಿರಿ, ಹುಚ್ಚಪ್ಪ ಹಳ್ಳಿಕೇರಿ, ಮಹಿಳಾ ಘಟಕದ ಅನ್ನಮ್ಮ, ಅಮರಮ್ಮ, ಪ್ರೇಮವ್ವ, ಲಲಿತಮ್ಮ, ರಾಜಮ್ಮ ಮುಂತಾದವರು ಇದ್ದರು.