ಸಾರಾಂಶ
ಕನ್ನಡಪ್ರಭ ವಾರ್ತೆ, ಬೀದರ್
ಬರುವ 8 ದಿನಗಳ ಒಳಗಾಗಿ ಬೀದರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಳೆ ಹಾನಿ ಕುರಿತು ಅಧಿಕಾರಿಗಳು ರೈತರ ಭೂಮಿಯನ್ನು ಇಂಚಿಂಚೂ ಸರ್ವೆ ಮಾಡಿ ಎಕರೆಗೆ 50 ಸಾವಿರ ರು.ಗಳ ಪರಿಹಾರಕ್ಕೆ ಶಿಫಾರಸ್ಸು ಮಾಡಿ ಸರ್ಕಾರದಿಂದ ಕೊಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್ ಎಚ್ಚರಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಇಸ್ಲಾಂಪೂರ ಗ್ರಾಮ ಸಂಪೂರ್ಣ ಮುಳುಗಡೆಯಾಗಿದೆ. ಹೊಲಗಳು ರೈತರಿಗೆ ಗುರುತು ಸಿಗದಷ್ಟು ಮುಳುಗಿ ಹಾಳಾಗಿವೆ. ರೈತರು ಸಾಲಮಾಡಿ ಬಿತ್ತನೆ ಮಾಡಿದ್ದಾರೆ, ಈಗ ಮತ್ತೆ ಸಾಲ ಮಾಡಿ ಹಾಳಾದ ಬೆಳೆಯನ್ನು ಕೀಳುವ ಸ್ಥಿತಿ ಬಂದೊದಗಿದೆ ಎಂದರು.
ಸಾಂಗ್ವಿ, ಬಂಪಳ್ಳಿ, ಜಾಂಪಾಡ್, ಚಿಮಕೋಡ, ನೆಮತಾಬಾದ ಹೀಗೆ ಹಲವು ಗ್ರಾಮಗಳಲ್ಲಿ ಬಹುತೇಕ ಬೆಳೆಗಳು ಹಾಳಾಗಿದ್ದು, ಸರ್ಕಾರದ ಯಾವೊಬ್ಬ ಅಧಿಕಾರಿಗೂ ಕಾಳಜಿ ಇಲ್ಲದಂತಾಗಿದೆ. ಇನ್ನು ಜಿಲ್ಲೆ ಯವರೇ ಆದ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ರಸ್ತೆ ಮೂಲಕವೇ ಕಣ್ಣಾಡಿಸಿ ಹೋಗಿದ್ದಾರೆಯೇ ಹೊರತು ಹೊಲಗದ್ದೆಗಳಿಗೆ ತೆರಳಿ ವಸ್ತುಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ ಎಂಬ ಕುರಿತು ರೈತರು ನಮ್ಮ ಮುಂದೆ ನೋವು ತೋಡಿಕೊಂಡಿದ್ದಾರೆಂದು ಠಾಕೂರ್ ಆರೋಪಿಸಿದರು.ಚಿಮಕೋಡ, ಅಲ್ಲಾಪುರ ಗ್ರಾಮದಲ್ಲಿ ನದಿಯ ಒತ್ತಡ ಹಾಗೂ ಹಳ್ಳ ಕೊಳ್ಳಗಳ ಅತಿಯಾದ ಹರಿಯುವಿಕೆಯಿಂದ ಜಮೀನು ಮುಳುಗಡೆಯಾಗಿವೆ. ಚಾಂಬಾಳ, ಹಿಪ್ಪಳಗಾಂವ ಮತ್ತು ಕನ್ನಳ್ಳಿ ಗ್ರಾಮಗಳಲ್ಲಿನ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆತು ಹೋಗಿವೆ. ಪೌರಾಡಳಿತ ಸಚಿವರು ದಿನಾಂಕ ನಿಗದಿಪಡಿಸಿದರೂ ಕೆಲವೊಂದು ಗ್ರಾಮಗಳಿಗೆ ಭೇಟಿಗೂ ಹೋಗಿಲ್ಲ. ಜಿಲ್ಲಾಡಳಿತದಿಂದಲೂ ರೈತರಿಗೆ ಯಾವುದೇ ಸಹಕಾರ ಸಿಕ್ಕಿಲ್ಲ ಎಂದು ದೂರಿದರು.
ಕೆಲವೊಂದು ಗ್ರಾಮಗಳಲ್ಲಿ ಅಂಗನವಾಡಿ ಕೂಡಾ ಬಿದ್ದಿವೆ. ಅಧಿಕಾರಿಗಳಿಗೆ ಕೇಳಿದರೆ ರಿಪೇರಿಗಾಗಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಇಂದಿಗೂ ರಿಪೇರಿ ಆಗಿಲ್ಲ. ಇಂತಹ ಸಂದರ್ಭದಲ್ಲಿ ಸ್ಥಳೀಯರಿಗೆ, ರೈತರಿಗೆ ನಾನು ಧೈರ್ಯ ಹೇಳಿ ಬಂದಿದ್ದೇನೆ. ಬೆಳೆ ಹಾನಿಯ ಸಮಗ್ರ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಚಲುವನಾರಾಯಣಸ್ವಾಮಿ ಅವರಿಗೂ ಕಳುಹಿಸುತ್ತಿದ್ದೇವೆ. ಸರ್ಕಾರ ಎಕರೆಗೆ 50 ಸಾವಿರ ರುಪಾಯಿ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಪರಿಹಾರ ನೀಡದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಠಾಕೂರ್ ಎಚ್ಚರಿಸಿದರು.ಪ್ರಮುಖರಾದ ದೀಪಕ ಗಾದಗೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ಶಶಿ ಹೊಸಳ್ಳಿ, ಪ್ರಮುಖರಾದ ರಾಜೇಂದ್ರ ಪೂಜಾರಿ, ನಿಜಲಿಂಗಪ್ಪ, ನಾಗೇಂದ್ರ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಿಎಸ್‌ಟಿ ಕಡಿತ: ಮಧ್ಯಮ ವರ್ಗಕ್ಕೆ ದಸರಾ ಕೊಡುಗೆಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ವಿವಿಧ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆ ಕಡಿಮೆ ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ನಾವು ಸ್ವಾಗತ ಮಾಡುತ್ತೇವೆ. ಇದು ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ದಸರಾ ಕೊಡುಗೆ ಎಂದು ಹೇಳಬಹುದು. ಅವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.