ನಗರದ ಕೆ.ಆರ್. ಬಡಾವಣೆಯ ಶ್ರೀರಾಮ ಸೇವಾ ಸಮಿತಿಯಿಂದ ಶ್ರೀರಾಮ ನವಮಿ ಅಂಗವಾಗಿ 59ನೇ ವರ್ಷದ ಶ್ರೀರಾಮೋತ್ಸವದಲ್ಲಿ 8 ದಿನಗಳ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರು ನಗರದ ಕೆ.ಆರ್. ಬಡಾವಣೆಯ ಶ್ರೀರಾಮ ಸೇವಾ ಸಮಿತಿಯಿಂದ ಶ್ರೀರಾಮ ನವಮಿ ಅಂಗವಾಗಿ 59ನೇ ವರ್ಷದ ಶ್ರೀರಾಮೋತ್ಸವದಲ್ಲಿ 8 ದಿನಗಳ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀರಾಮನವಮಿ ಪ್ರಯುಕ್ತ ಶುಕ್ರವಾರ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿತ್ತು. ಮೊದಲ ದಿನದ ವಿಶೇಷ ಪೂಜೆಯನ್ನು ಉದ್ಯಮಿ ಡಿ.ಆರ್. ರಾಘವೇಂದ್ರ ಗುಪ್ತ ಕುಟುಂಬದವರು ಆಯೋಜಿಸಿದ್ದರು. ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀರಾಮ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ, ಹೆಸರುಬೇಳೆ, ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು. ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಜಿ.ವಿ. ಶ್ರೀನಿವಾಸ್, ಉಪಾಧ್ಯಕ್ಷರಾದ ಜಿ.ವಿ. ವಾಸುದೇವ್, ಜಗಜ್ಯೋತಿ ಸಿದ್ಧರಾಮಯ್ಯ, ಸುಭಾಷಿಣಿ ರವೀಶ್, ರೇಣುಕಾ, ಕಾರ್ಯದರ್ಶಿ ಕೆ.ಜಿ. ಶ್ರೀಧರ್, ಸಹ ಕಾರ್ಯದರ್ಶಿ ಎಚ್.ಎಸ್. ಬಸವರಾಜು, ಖಜಾಂಚಿ ಪಿ.ಕೆ. ರಾಘವೇಂದ್ರ, ಮುಖಂಡರಾದ ಸಿಂಧೂರ್ ಶ್ರೀನಿವಾಸ್, ರಂಗಾನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಶ್ರೀರಾಮನವಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀರಾಮೋತ್ಸವದ ಅಂಗವಾಗಿ ಏಪ್ರಿಲ್ ೩ರವರೆಗೆ ಶ್ರೀರಾಮನಿಗೆ ಪ್ರತಿದಿನ ವಿಶೇಷ ಪೂಜೆ, ವಿವಿಧ ಅಲಂಕಾರ ಹಾಗೂ ರಾಮಮಂದಿರದ ಡಾ. ಜಯರಾಮರಾವ್ ವೇದಿಕೆಯಲ್ಲಿ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 27ರಂದು ಎನ್.ಕೆ. ಮೋಹನ್‌ಕುಮಾರ್ ಮತ್ತು ವೃಂದದಿಂದ ಹರಿಕಥೆ, 28ರಂದು ಮೇಧಾ ವಿದ್ಯಾಭೂಷಣ್ ಮತ್ತು ವೃಂದದ ನಾದ ಸಂಕೀರ್ತನೆ, 29ರಂದು ಅಂಜಲಿ ಶ್ರೀರಾಮ್ ಅವರಿಂದ ದಾಸರ ಪದಗಳ ಗಾಯನ, 30 ರಂದು ಮೈಸೂರು ರಾಮಚಂದ್ರ ಆಚಾರ್ ಅವರಿಂದ ಸಂಕೀರ್ತನೆ, 31 ರಂದು ಮಾಲತಿ ರಾಘವೇಂದ್ರ ಮತ್ತು ದಿವ್ಯಾ ದಿವಾಕರ್ ಅವರಿಂದ ಶಾಸ್ತ್ರೀಯ ಸಂಗೀತ, ಏಪ್ರಿಲ್ 1 ರಂದು ಬಸಂತ್ ಚಂದ್ರಶೇಖರ್ ಅವರ ಮೆಂಡೋಲಿನ್ ವಾದನ, ೨ರಂದು ಸುಳಾದಿ ಹನುಮೇಶಾಚಾರ್ ಅವರಿಂದ ಶ್ರೀರಾಮ ಪಟ್ಟಾಭಿಷೇಕ ಪ್ರವಚನ, ಕೊನೆಯ ದಿನ ಏಪ್ರಿಲ್ 3ರಂದು ಸಂಜೆ 6 ಗಂಟೆಗೆ ಶಯನೋತ್ಸವ ಹಮ್ಮಿಕೊಳ್ಳಲಾಗಿದೆ.