ಸಾರಾಂಶ
ಚನ್ನಪಟ್ಟಣ: ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ೮ ಮಂದಿ ಆರೋಪಿಗಳನ್ನು ಬಂಧಿಸಿರುವ ಅಕ್ಕೂರು ಪೊಲೀಸ್ ಠಾಣೆ ಪೊಲೀಸರು, ಬಂಧಿತರಿಂದ ವಿವಿಧ ರೀತಿಯ ಮಾರಕಾಸ್ತ್ರಗಳು, ಕಾರು, ಬೈಕ್, ಚಿನ್ನಾಭರಣದ ಜೊತೆಗೆ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಮಾಕನಹಳ್ಳಿ ಗ್ರಾಮದಲ್ಲಿ ಮಾರ್ಚ್ ೨೩ರಂದು ಅಪರಿಚಿತರು ಮಾರಕಾಸ್ತ್ರ ತೋರಿಸಿ ನಗದು ಮತ್ತು ಚಿನ್ನಾಭರಣ ದೋಚಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಹಲವೆಡೆ ಮಾಹಿತಿ ಸಂಗ್ರಹಿಸಿ ೮ ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮಾರಕಾಸ್ತ್ರಗಳು, ೫ ಮೊಬೈಲ್, ಒಂದು ಕಾರು, ೪ ದ್ವಿಚಕ್ರವಾಹನ, ೪೦ ಗ್ರಾಂ ಚಿನ್ನದ ಗಟ್ಟಿ ಹಾಗೂ ೧೫ ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತರ ಪೈಕಿ ಮೊದಲ ಆರೋಪಿ ಮೇಲೆ ಚನ್ನಪಟ್ಟಣ, ಕುಣಿಗಲ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ೨೧ ಪ್ರಕರಣಗಳು ದಾಖಲಾಗಿದ್ದು, ಉಳಿದ ಆರೋಪಿಗಳು ಸಹ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ದರೋಡೆ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಇದರ ಜೊತೆಗೆ ಇನ್ನೂ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಪ್ರಕರಣವನ್ನು ಭೇದಿಸಿದ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು ಅಭಿನಂದಿಸಿದ್ದಾರೆ.