8 ತಂಡಗಳು ಮುಂದಿನ ಸುತ್ತಿಗೆ, ಇಂದು ಕ್ವಾರ್ಟರ್ ಫೈನಲ್

| Published : Dec 08 2024, 01:17 AM IST

ಸಾರಾಂಶ

2ನೇ ದಿನದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ದ. ಕೊಡಗಿನ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆಗಳನ್ನು ಹೊಂದಿರುವ ಕೊಡವ ಮನೆತನಗಳ ನಡುವಿನ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಫ್ಲೈಯರ್ಸ್ ಕಪ್-2024ರ 2ನೇ ದಿನದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಸುತ್ತು ಭಾನುವಾರ (ಇಂದು) ನಡೆಯಲಿದೆ.

2ನೇ ದಿನದ ಪಂದ್ಯದಲ್ಲಿ ತೀತಮಾಡ, ಮಳವಂಡ, ಕಡೇಮಾಡ, ಚೇಂದಂಡ, ಮುರುವಂಡ, ಚಂದೂರ ಮತ್ತು ಕೊಂಗಂಡ ತಂಡಗಳು ವಿಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದ್ದು, ಇಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದೆ.

ದಿನದ ಮೊದಲ ಪಂದ್ಯದಲ್ಲಿ ಅಮ್ಮೇಕಂಡ ತಂಡವು ಗೈರು ಹಾಜರಾದ ಕಾರಣ ತೀತಮಾಡ ತಂಡವು ವಾಕ್ ಓವರ್ ಮೂಲಕ ಮುನ್ನಡೆ ಸಾಧಿಸಿತು. 2ನೇ ಪಂದ್ಯದಲ್ಲಿ ಮಳವಂಡ ತಂಡವು ಕೋಲತಂಡ ತಂಡವನ್ನು 5-4 ಗೋಲುಗಳ ಮೂಲಕ ಶೂಟೌಟ್ ನಲ್ಲಿ ಮಣಿಸಿತು. ಮಳವಂಡ ತಂಡದ ಅತಿಥಿ ಆಟಗಾರ ಸಜನ್ 17ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಎದುರಾಳಿ ತಂಡದ ಅತಿಥಿ ಆಟಗಾರ ಬೋಪಣ್ಣ 36ನೇ ನಿಮಿಷದಲ್ಲಿ ಗೋಲೊಂದನ್ನು ಬಾರಿಸಿ ಅಂತರ ಸಮನಾಗಿಸಿದರು. ದ್ವಿತೀಯಾರ್ಧ ಅಂತ್ಯಗೊಳ್ಳುವವರೆಗೂ ಉಭಯ ತಂಡಗಳು ಮತ್ತೆ ಗೋಲು ದಾಖಲಿಸುವಲ್ಲಿ ವಿಫಲವಾದ ಕಾರಣ ಶೂಟ್ ಔಟ್ ಅಳವಡಿಸಲಾಯಿತು. ಶೂಟ್ ಔಟ್ ನಲ್ಲಿ ಮಳವಂಡ ತಂಡದ ಪರ 4 ಗೋಲು ದಾಖಲಾದರೆ, ಕೋಲತಂಡ ತಂಡದ ಪರ ಕೇವಲ 3 ಗೋಲುಗಳಷ್ಟೇ ದಾಖಲಾಯಿತು.

3ನೇ ಪಂದ್ಯದಲ್ಲಿ ಕಡೇಮಾಡ ತಂಡವು ಕಳೆದ ವರ್ಷದ ಚಾಂಪಿಯನ್ ಚೇಂದಿರ ತಂಡವನ್ನು ಒಟ್ಟು 8-7 ಗೋಲುಗಳ ಅಂತರದಲ್ಲಿ ಶೂಟ್ ಔಟ್ ನಲ್ಲಿ ಸೋಲಿಸಿತು. ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲಿ ಚೇಂದಿರ ತಂಡದ ಅತಿಥಿ ಆಟಗಾರ ಪೂಣಚ್ಚ ಮಿಂಚಿನ ಗೋಲೊಂದನ್ನು ದಾಖಲಿಸಿ ತಂಡದ ಖಾತೆ ತೆರೆದರು. ಬಳಿಕ 7ನೇ ನಿಮಿಷದಲ್ಲಿ ಪೂಣಚ್ಚ ಮತ್ತೊಂದು ಗೋಲು ದಾಖಲಿಸಿ ಭರವಸೆ ಮೂಡಿಸಿದರು. ಇದರಿಂದ ಬಿರುಸಿನ ಆಟಕ್ಕೆ ಒತ್ತು ನೀಡಿದ ಕಡೇಮಾಡ ತಂಡದ ಅತಿಥಿ ಆಟಗಾರ ಮ್ಯಾಕ್ ಮೊಣ್ಣಪ್ಪ 18ನೇ ನಿಮಿಷದಲ್ಲಿ ಮತ್ತು ಮತ್ತೋರ್ವ ಅತಿಥಿ ಆಟಗಾರ ಗೌತಮ್ 19ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರ ಸಮನಾಗಿಸಿದರು. ನಂತರ ಕಡೇಮಾಡ ತಂಡದ ಸಚಿನ್ ಸುಬ್ಬಯ್ಯ 38ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದಾದ ಬಳಿಕ ಚೇಂದಿರ ತಂಡದ ಅತಿಥಿ ಆಟಗಾರ ಮಂಜುನಾಥ್ 47ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮತ್ತೆ ಅಂತರವನ್ನು ಸಮನಾಗಿಸಿದರು. ಉಭಯ ತಂಡಗಳ ಸಮಬಲದ ಹೋರಾಟ ಮುಂದುವರಿದರೂ ದ್ವಿತೀಯಾರ್ಧದ ಕೊನೆಯವರೆಗೂ ಯಾವುದೇ ಗೋಲು ದಾಖಲಾಗದ ಕಾರಣ ಶೂಟ್ ಔಟ್ ನಿಯಮಾವಳಿ ಅಳವಡಿಸುವುದು ಅನಿವಾರ್ಯವಾಯಿತು. ಈ ವೇಳೆ ಕಡೇಮಾಡ ತಂಡದ ಪರ 5 ಗೋಲು ದಾಖಲಾದರೆ ಚೇಂದಿರ ತಂಡದ ಪರ 4 ಗೋಲು ದಾಖಲಾಯಿತು.

4ನೇ ಪಂದ್ಯದಲ್ಲಿ ಚೇಂದಂಡ ತಂಡವು ನಂಬುಡುಮಾಡ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ಬಿಪಿನ್ 12ನೇ ನಿಮಿಷದಲ್ಲಿ, ಚಿಟ್ಟಿಯಪ್ಪ 28ನೇ ನಿಮಿಷದಲ್ಲಿ ಮತ್ತು ಅತಿಥಿ ಆಟಗಾರ ಅವಿನಾಶ್ 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಪರಾಜಿತ ತಂಡದ ಪರ ಅತಿಥಿ ಆಟಗಾರ ಪ್ರಜ್ವಲ್ 33ನೇ ನಿಮಿಷದಲ್ಲಿ ಮತ್ತು ನಿಹಾಲ್ 49ನೇ ನಿಮಿಷದಲ್ಲಿ ಗೋಲು ಬಾರಿಸಿದರು. 5ನೇ ಪಂದ್ಯದಲ್ಲಿ ಮುರುವಂಡ ತಂಡ ಕರ್ತಮಾಡ ತಂಡವನ್ನು 8-6 ಗೋಲುಗಳ ಅಂತರದಲ್ಲಿ ಶೂಟೌಟಿನಲ್ಲಿ ಪರಾಭವಗೊಳಿಸಿತು. ಮುರುವಂಡ ತಂಡದ ಪರ ಅಣ್ಣಯ್ಯ 18ನೇ ನಿಮಿಷದಲ್ಲಿ, ಕಾರ್ಯಪ್ಪ 30ನೇ ನಿಮಿಷದಲ್ಲಿ ಮತ್ತು ಅತಿಥಿ ಆಟಗಾರ ವಿವಿದ್ ಉತ್ತಪ 41ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಕರ್ತಮಾಡ ತಂಡದ ಪರವಾಗಿ ಅತಿಥಿ ಆಟಗಾರ ಅಯ್ಯಪ್ಪ 40ನೇ ನಿಮಿಷದಲ್ಲಿ, ಲಿತೇಶ್ ಮುತ್ತಪ್ಪ 44ನೇ ನಿಮಿಷದಲ್ಲಿ ಹಾಗೂ ಅತಿಥಿ ಆಟಗಾರ ಅಪ್ಪಯ್ಯ 46ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂದ್ಯದ ಗೋಲಿನ ಅಂತರ ಸಮವಾಗಿಸಿದರು. ಇದರಿಂದ ಕೊನೆಯಲ್ಲಿ ಶೂಟೌಟ್ ಅಳವಡಿಸಿದಾಗ ವಿಜೇತ ತಂಡದ ಪರ 5 ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ ಕೇವಲ 3 ಗೋಲುಗಳು ದಾಖಲಾಯಿತು.

6ನೇ ಪಂದ್ಯದಲ್ಲಿ ಚಂದೂರ ತಂಡ ಚೊಟ್ಟೆಪಂಡ ತಂಡವನ್ನು ಶೂಟ್ ಔಟ್ ನಲ್ಲಿ 3-2 ಗೋಲುಗಳ ಅಂತರದಿಂದ ಮಣಿಸಿತು. ದ್ವಿತೀಯಾರ್ಧದ ಅವಧಿ ಕೊನೆಗೊಂಡಾಗ ಉಭಯ ತಂಡಗಳು ಯಾವುದೇ ಫೀಲ್ಡ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಇದರಿಂದ ಶೂಟ್ ಔಟ್ ನಲ್ಲಿ ಚಂದೂರ ತಂಡದ ಪರವಾಗಿ 3 ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ 2 ಗೋಲುಗಳಷ್ಟೇ ದಾಖಲಾಯಿತು. ದಿನದ ಕೊನೆಯ ಪಂದ್ಯದಲ್ಲಿ ಕೊಂಗಂಡ ತಂಡ ತೀತಿಮಾಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ವಿಜೇತ ತಂಡದ ಪರವಾಗಿ 12ನೇ ನಿಮಿಷದಲ್ಲಿ ಪೊನ್ನಣ್ಣ, 15ನೇ ನಿಮಿಷದಲ್ಲಿ ಅತಿಥಿ ಆಟಗಾರ ನಾಚಪ್ಪ ಗೋಲು ಬಾರಿಸಿದರೆ ಪರಾಜಿತ ತಂಡದ ಪರವಾಗಿ 35ನೇ ನಿಮಿಷದಲ್ಲಿ ಬಿದ್ದಪ್ಪ ಏಕೈಕ ಗೋಲು ಬಾರಿಸಿದರು.

ಇಂದಿನ ಕ್ವಾರ್ಟರ್ ಫೈನಲ್ ಪಂದ್ಯಾವಳಿಗಳು

ಬೆಳಗ್ಗೆ 10 ಗಂಟೆಗೆ: ಕಂಜಿತಂಡ ಮತ್ತು ಚಂದೂರ

ಬೆಳಗ್ಗೆ 11:30 ಗಂಟೆಗೆ: ಚೇಂದಂಡ ಮತ್ತು ಕೊಂಗಂಡ

ಮಧ್ಯಾಹ್ನ 01:00 ಗಂಟೆಗೆ: ಮುರುವಂಡ ಮತ್ತು ಮಳವಂಡ

ಮಧ್ಯಾಹ್ನ 2:30 ಗಂಟೆಗೆ: ಕಡೇಮಾಡ ಮತ್ತು ತೀತಮಾಡ