ಸಾರಾಂಶ
ಹುಬ್ಬಳ್ಳಿ:
ರಾಜ್ಯದಲ್ಲಿ ಗೋಡಂಬಿಯಿಂದ ₹ 8 ಸಾವಿರ ಕೋಟಿ ವಹಿವಾಟು ನಡೆಯುತ್ತಿದ್ದು, ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ₹ 800 ಕೋಟಿ ಆದಾಯ ಹೋಗುತ್ತಿದೆ. ಮಾರುಕಟ್ಟೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಮಂಗಳೂರಿನ ಕರ್ನಾಟಕ ಗೋಡಂಬಿ ಉತ್ಪಾದಕರ (ಕೆಸಿಎಂಎ) ಸಂಘದ ಅಧ್ಯಕ್ಷ ಎಸ್. ಅನಂತಕೃಷ್ಣ ರಾವ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ವರ್ಷಕ್ಕೆ 4 ಲಕ್ಷ ಟನ್ ಗೋಡಂಬಿ ಬೆಳೆಯಲಾಗುತ್ತಿದ್ದು, ಈ ಪೈಕಿ 1.50 ಲಕ್ಷ ಟನ್ ಮಾತ್ರ ಕೈ ಸೇರುತ್ತಿದೆ. ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ 13 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಒಟ್ಟಾರೆ 20 ಲಕ್ಷ ಟನ್ನನಷ್ಟು ಗೋಡಂಬಿ ಸಂಸ್ಕರಣೆಯಾಗುತ್ತಿದೆ ಎಂದರು.
ಗೋಡಂಬಿ ಉದ್ಯಮದಲ್ಲಿ ವಾರ್ಷಿಕ ಅಂದಾಜು ₹ 30,000 ಕೋಟಿ ವಹಿವಾಟು ನಡೆಯುತ್ತಿದ್ದು, ದೇಶದಲ್ಲೇ ಹೆಚ್ಚಾಗಿ ಗೋಡಂಬಿ ಬೆಳೆಯುವಂತಾದರೆ ವಾರ್ಷಿಕ ವಹಿವಾಟು ಇನ್ನಷ್ಟು ಹೆಚ್ಚಲಿದೆ. 1 ಕೋಟಿ ಗೋಡಂಬಿ ಸಸಿ ನೆಟ್ಟರೆ 8ರಿಂದ 10 ವರ್ಷದಲ್ಲಿ 1 ಲಕ್ಷ ಟನ್ ಇಳುವರಿ ಸಿಗುತ್ತದೆ. ಇದರಿಂದ ಕೋಟ್ಯಾಂತರ ರೂಪಾಯಿ ವರಮಾನ ಸಿಗುತ್ತದೆ. ಪೇಜಾವರ ಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನೆರವಿನೊಂದಿಗೆ 26 ಜಿಲ್ಲೆಗಳಲ್ಲಿ ಗೋಡಂಬಿ ಉತ್ಪಾದನೆಯ ಜಾಗೃತಿ ಮೂಡಿಸಿ, 13 ಲಕ್ಷ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಶೇ. 80ರಷ್ಟುಇಳುವರಿಯೂ ಬಂದಿದೆ ಎಂದು ವಿವರಿಸಿದರು.ಭಾರತದಲ್ಲಿ ಗೋಡಂಬಿಗೆ ಉತ್ತಮ ಬೇಡಿಕೆಯಿದ್ದು, ಇದನ್ನು ಪೂರೈಸಲು ವಿದೇಶದಿಂದ ಶೇ. 75ರಷ್ಟು ಕಚ್ಚಾ ಗೋಡಂಬಿ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಶೇ. 50ರಷ್ಟಾದರೂ ಗೋಡಂಬಿ ಬೆಳೆಯಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಗೋಡಂಬಿ ಸಂಸ್ಕರಣೆಯ 100ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಗೋಡಂಬಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಎಲ್ಲ ಕಡೆಯೂ ಮಾರುಕಟ್ಟೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದರು.ಗೋಡಂಬಿ ಸಂಸ್ಕರಣೆ ಉದ್ಯಮದಲ್ಲಿ 12 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಉದ್ಯಮದಿಂದ ಪರೋಕ್ಷವಾಗಿ ಹಲವರು ಜೀವನ ನಡೆಸುತ್ತಿದ್ದಾರೆ. ಗೋಡಂಬಿ ಬೆಳೆಯಿಂದ ಸುತ್ತಲಿನ ವಾತಾವರಣ ತಂಪಾಗಿರುತ್ತದೆ. ಕಲ್ಪವೃಕ್ಷದಂತಿರುವ ಗೋಡಂಬಿ ಉತ್ಪಾದನೆ ಹಾಗೂ ಉದ್ಯಮದ ಉತ್ತೇಜನಕ್ಕಾಗಿ ರೈತರು, ಮಾರಾಟಗಾರರ ಸಭೆಯನ್ನು ವಿವಿಧೆಡೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ತುಕಾರಾಮ ಪ್ರಭು, ಖಜಾಂಚಿ ಗಣೇಶ ಕಾಮತ್, ಕಾರ್ಯದರ್ಶಿ ಅಮಿತ್‌ಪೈ, ಜಂಟಿ ಕಾರ್ಯದರ್ಶಿ ಸನತ್‌ಪೈ ಇತರರು ಇದ್ದರು.