ಸಾರಾಂಶ
ಜೂ. 21 ರಂದು ನಡೆಯಲಿರುವ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭಕ್ಕೆ ತಾಲೂಕಿನ ವಿವಿಧ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 8 ಸಾವಿರ ಅಭಿಮಾನಿಗಳು ತೆರಳಲಿದ್ದಾರೆಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜೂ. 21 ರಂದು ನಡೆಯಲಿರುವ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭಕ್ಕೆ ತಾಲೂಕಿನ ವಿವಿಧ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 8 ಸಾವಿರ ಅಭಿಮಾನಿಗಳು ತೆರಳಲಿದ್ದಾರೆಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ತಿಳಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಎನ್.ರಾಜಣ್ಣನವರಿಗೆ ರಾಜ್ಯಾದ್ಯಂತ ಅಭಿಮಾನಿಗಳು ಇದ್ದಾರೆ. ಜೂ 21 ರಂದು ನಡೆಯಲಿರುವ ಸಮಾರಂಭಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆ. ಎಲ್ಲರೂ ಸಹ ರಾಜಣ್ಣನವರ ಅಮೃತ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ ಎಂದು ಸಿ.ವಿ.ಮಹಲಿಂಗಪ್ಪ ಹೇಳಿದರು. ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಗಂಗಣ್ಣ , ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ, ಕೆ.ಎನ್.ರಾಜಣ್ಣನವರನ್ನು ಪಕ್ಷಾತೀತವಾಗಿ ಪ್ರೀತಿಸುವ ಜನ ಸಮೂಹವೇ ಇದೆ. ಅವರು ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಮಿತಿಯೇ ಇಲ್ಲ. ಅವರ ಕಾರ್ಯದಕ್ಷತೆಯಿಂದ ರಾಜ್ಯದ ಹಾಗೂ ಜಿಲ್ಲೆಯ ಲಕ್ಷಾಂತರ ರೈತಾಪಿಗಳು ಆರ್ಥಿಕವಾಗಿ ಸಬಲರಾಗಲು ಕಾರಣರಾಗಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ವೆಂಕಟೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೂವನಹಳ್ಳಿ ದೇವರಾಜು, ಸಹಕಾರಿ ಯೂನಿಯನ್ ನಿರ್ದೇಶಕ ವಿಜಯಕುಮಾರ್ ಉಪಸ್ಥಿತರಿದ್ದರು.