ಪತ್ನಿಯನ್ನೇ ಕೊಂದವನಿಗೆ 8 ವರ್ಷ ಜೈಲು, ₹80 ಸಾವಿರ ದಂಡ

| Published : Dec 17 2024, 12:45 AM IST

ಸಾರಾಂಶ

ಹಳೆಯ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ತಾಲೂಕಿನ ಗೊಲ್ಲರಹಳ್ಳಿಯ ಎಂ.ಎನ್.ಬಸವರಾಜ ಎಂಬ ಅಪರಾಧಿಗೆ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹80 ಸಾವಿರ ದಂಡ ವಿಧಿಸಿ ಹೆಚ್ಚುವರಿ ಸತ್ರ ಮತ್ತು ತ್ವರಿತ ದಾವಣಗೆರೆ ನ್ಯಾಯಾಲಯ ತೀರ್ಪು ನೀಡಿದೆ.

- ಸುಶೀಲಮ್ಮ ಪ್ರಕರಣದಲ್ಲಿ ಗೊಲ್ಲರಹಳ್ಳಿ ಬಸವರಾಜಗೆ ಶಿಕ್ಷೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹಳೆಯ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ತಾಲೂಕಿನ ಗೊಲ್ಲರಹಳ್ಳಿಯ ಎಂ.ಎನ್.ಬಸವರಾಜ ಎಂಬ ಅಪರಾಧಿಗೆ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹80 ಸಾವಿರ ದಂಡ ವಿಧಿಸಿ ಹೆಚ್ಚುವರಿ ಸತ್ರ ಮತ್ತು ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.

1998ರಲ್ಲಿ ಬಸವರಾಜನಿಗೆ ಕುರುಡಿ ಗ್ರಾಮದ ಸುಶೀಲಮ್ಮ ಜತೆ 25 ಸಾವಿರ ನಗದು, ಒಂದೂವರೆ ತೊಲ ಚಿನ್ನಾಭರಣ ನೀಡಿ ವಿವಾಹ ಮಾಡಿಕೊಡಲಾಗಿತ್ತು. ಅನಂತರ ಗಂಡ ಬಸವರಾಜ, ಆತನ ತಂದೆ, ತಾಯಿ, ಚಿಕ್ಕಪ್ಪ, ತಮ್ಮ ಎಲ್ಲರೂ ಸೇರಿಕೊಂಡು, ₹50 ಸಾವಿರ ವರದಕ್ಷಿಣೆ, ಸರ್ಕಾರಿ ನೌಕರಿಗಾಗಿ ಸುಶೀಲಮ್ಮನಿಗೆ ಕಿರುಕುಳ ನೀಡುತ್ತಿದ್ದರು. 2002ರ ಡಿ.18ರಂದು ಸುಶೀಲಮ್ಮ ರಾತ್ರಿ ಮಲಗಿದ್ದ ವೇಳೆ ಗಂಡ ಮನೆಯ ಎಲ್ಲರ ಕುಮ್ಮಕ್ಕಿನಿಂದ ಕೊಲೆ ಮಾಡಿ, ಪಂಚೆಯನ್ನು ಕುತ್ತಿಗೆಗೆ ಕಟ್ಟಿ, ತೊಲೆಗೆ ನೇತು ಹಾಕಿದ್ದರು. ಈ ಬಗ್ಗೆ ಮೃತ ಸುಶೀಲಮ್ಮನ ಸಹೋದರ ಕುರುಡಿ ಗ್ರಾಮದ ಎಂ.ಎಚ್. ಬಸವರಾಜ ಗಾಂಧಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಹೆಚ್ಚುವರಿ ಸತ್ರ ಮತ್ತು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2004ರ ಮಾ.4ರಂದು ಬಿಡುಗಡೆಯಾಗಿತ್ತು. ಹೈಕೋರ್ಟ್‌ನಲ್ಲಿ ಮೃತಳ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಿದಾಗ, ಆರೋಪಿಗೆ 3 ವರ್ಷ ಶಿಕ್ಷೆ ವಿಧಿಸಿ, ನ್ಯಾಯಾಂಗ ಬಂಧನದಲ್ಲಿದ್ದ ಅವಧಿ ಶಿಕ್ಷೆಗೆ ಪರಿಗಣಿಸಿ, ಬಿಡುಗಡೆಗೊಳಿಸಿತ್ತು.

ಅನಂತರ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ 2013ರಲ್ಲಿ ಮೇಲ್ಮನವಿ ಸಲ್ಲಿಸಿದ್ದಾಗ, ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿ, ಆದೇಶದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಗೆ ದೂರುದಾರರು ಮತ್ತು ಆರೋಪಿಯ ಪರ ಸಾಕ್ಷ್ಯಾಧಾರಗಳಿದ್ದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಿ, ಸ್ವಂತ ವಿವೇಚನೆಯಿಂದ ಪ್ರಕರಣದ ಕೂಲಂಕಷ ಪರಿಶೀಲಿಸಿ, ಆದೇಶ ಮಾಡುವ ಅಧಿಕಾರ ನೀಡಿತ್ತು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್. ಪ್ರವೀಣಕುಮಾರ ಅವರು 1ನೇ ಆರೋಪಿ ಎಂ.ಎನ್. ಬಸವರಾಜ (30)ನ ಮೇಲಿನ ಆರೋಪ ಸಾಬೀತಾಗಿದ್ದರಿಂದ ಆತನಿಗೆ 8 ವರ್ಷ ಕಾರಾಗೃಹ ಶಿಕ್ಷೆ ಮತ್ತು ₹80 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಕೆ.ಜಿ. ಜಯಪ್ಪ ವಾದ ಮಂಡಿಸಿದ್ದರು. ತನಿಖಾಧಿಕಾರಿಯಾದ ಡಿವೈಎಸ್ಪಿ ಆರ್.ಬಿ.ನಾಯಕ್, ಸರ್ಕಾರಿ ವಕೀಲರಾದ ಕೆ.ಜಿ. ಜಯಪ್ಪ ಹಾಗೂ ಆರೋಪಿಗೆ ಶಿಕ್ಷೆಯಾಗಲು ಶ್ರಮಿಸಿದ ಕುಟುಂಬ ವರ್ಗದವರನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ ಶ್ಲಾಘಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)