ಸಾರಾಂಶ
ಚಳ್ಳಕೆರೆ: ತಾಲೂಕಿನ ಭದ್ರಾ ಮೇಲ್ದಂಡೆ ಕಾಮಗಾರಿ ಹಾದುಹೋಗಿರುವ ರೈತರ ಜಮೀನಿನಲ್ಲಿ ಅಡಕೆ, ತೆಂಗು ಇತರೆ ತೋಟಗಾರಿಕೆ ಬೆಳೆಗಳಿದ್ದು, ಅವುಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಭಾನುವಾರ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಕಾಮಗಾರಿ ಸರಿಸುಮಾರು ೮೦%ರಷ್ಟು ಮುಗಿಯುತ್ತಾ ಬಂದಿದೆ. ಚಳ್ಳಕೆರೆ ಮತ್ತು ಪಾವಗಡ ತಾಲೂಕುಗಳ ಕೆಲವೊಂದು ಜಮೀನುಗಳಲ್ಲಿ ರೈತರು ವಾರ್ಷಿಕ ಬೆಳೆಗಳಾದ ತೆಂಗು, ಅಡಕೆ, ದಾಳಿಂಬೆ, ತೇಗ, ಬೀಟೆ, ನಿಂಬೆ, ಕಿತ್ತಲೆ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದಿದ್ದು, ಪೈಪ್‌ಲೈನ್ ಅಳವಡಿಸುವ ವೇಳೆ ಈ ಬೆಳೆಗಳಿಗೆ ಹಾನಿಯಾಗುವ ಸಂಭವ ಹೆಚ್ಚಿದೆ. ಆದ ಕಾರಣ ಅವರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ಪಿ.ಮಹದೇವಪುರ, ಕ್ಯಾದಿಗುಂಟೆ, ಗೋಸಿಕೆರೆ, ಲಿಂಗದಹಳ್ಳಿ, ಬೆಳ್ಳಿಬಟ್ಟಲು, ಶೈಲಾಪುರ, ವದನಕಲ್ಲು ಸೇರಿದಂತೆ ಹಲವಾರು ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ರೈತರೊಂದಿಗೆ ಮಾತನಾಡಿದ್ದೇನೆ. ರೈತರು ಹಲವಾರು ವರ್ಷಗಳಿಂದ ತಮ್ಮ ಜಮೀನುಗಳಲ್ಲಿ ಬೆಳೆಯನ್ನು ಬೆಳೆಸಿದ್ದಾರೆ. ಅದಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆ ಎಂದು ತಿಳಿಸಿದರು.ಚಳ್ಳಕೆರೆ ತಾಲೂಕು ವ್ಯಾಪ್ತಿಯ ೫೧, ಪಾವಗಡ ತಾಲೂಕು ವ್ಯಾಪ್ತಿಯ ೩೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಇನ್ನೂ ಒಂದು ವರ್ಷದೊಳಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆಯಲಿದೆ ಎಂದರು.
ಶೇ.೮೦ರಷ್ಟು ಪೈಪ್‌ಲೈನ್ ಕಾಮಗಾರಿ ಈಗಾಗಲೇ ಮುಗಿದಿದೆ. ಉಳಿದಂತೆ ರೈತರಿಗೆ ಪರಿಹಾರ ನೀಡಿ ಉಳಿದ ೨೦ರಷ್ಟು ಕೆಲಸವನ್ನು ೨೦೨೫ರಲ್ಲೇ ಪೂರ್ಣಗೊಳಿಸಿ ನೀರು ಹರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಎಂಜಿನಿಯರ್‌ಗಳಾದ ಪಾಟೀಲ್, ಮಧುಸೂಧನ್, ಎಇಇ ಜನಾರ್ಧನ್, ಅಮೋಘ, ರೈತ ಮುಖಂಡರಾದ ಎ.ನಾಗರಾಜ ಪರಶುರಾಮಪರ, ಶ್ರೀರಾಮಣ್ಣ, ಈರಣ್ಣ, ಯರಗುಂಟಪ್ಪ, ಚಿತ್ತಯ್ಯ, ಪಾಪಣ್ಣ, ರವಿ ಮುಂತಾದವರಿದ್ದರು.