ರಟ್ಟೀಹಳ್ಳಿ ತಾಲೂಕಿನಲ್ಲಿ ಬಿರುಗಾಳಿ ಮಳೆಗೆ 80 ವಿದ್ಯುತ್‌ ಕಂಬ, ನೂರಾರು ಮರ ಧರೆಗೆ

| Published : Apr 28 2025, 12:49 AM IST

ರಟ್ಟೀಹಳ್ಳಿ ತಾಲೂಕಿನಲ್ಲಿ ಬಿರುಗಾಳಿ ಮಳೆಗೆ 80 ವಿದ್ಯುತ್‌ ಕಂಬ, ನೂರಾರು ಮರ ಧರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಸಂಜೆ 5.30ರ ಸುಮಾರಿಗೆ ಆಲಿಕಲ್ಲು ಸಹಿತ ಭಾರಿ ಬಿರುಗಾಳಿ ಮಳೆ ಪ್ರಾರಂಭವಾಗಿ ಸುಮಾರು 20 ನಿಮಿಷಗಳ ಮಳೆ ಸುರಿಯಿತು.

ರಟ್ಟೀಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಎಲ್ಲೆಂದರಲ್ಲಿ ನೂರಾರು ಮರಗಳು ಹಾಗೂ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.ಭಾನುವಾರ ಸಂಜೆ 5.30ರ ಸುಮಾರಿಗೆ ಆಲಿಕಲ್ಲು ಸಹಿತ ಭಾರಿ ಬಿರುಗಾಳಿ ಮಳೆ ಪ್ರಾರಂಭವಾಗಿ ಸುಮಾರು 20 ನಿಮಿಷಗಳ ಮಳೆ ಸುರಿಯಿತು. ಇದೇ ವೇಳೆ ಭಾರಿ ಬಿರುಗಾಳಿ ಬೀಸಿದ ಪರಿಣಾಮ ರಟ್ಟೀಹಳ್ಳಿ ಮಾಸೂರ ರಸ್ತೆ ಮಧ್ಯೆ ಮರ ಬಿದ್ದು ಸಂಚಾರ ಬಂದ್‌ ಆಗಿ ಪ್ರಯಾಣಿಕರು ಬಸ್‌ನಿಂದ ಇಳಿದು ನಡೆದುಕೊಂಡೆ ಮನೆ ಸೇರುವಂತಾಯಿತು. ತೋಟಗಂಟಿ ರಸ್ತೆಯ ರಫೀಕ್ ಮುಲ್ಲಾ ಹಾಗೂ ಜಿಯಾವುಲ್ಲಾ ಮುಲ್ಲಾ ಅವರ ಮನೆಯ ತಗಡುಗಳು ಹಾರಿ ಹೋದ ಪರಿಣಾಮ ಮನೆಯ ಒಳಗಿದ್ದ ಗರ್ಭಿಣಿಗೆ ಸಣ್ಣಪುಟ್ಟ ಗಾಯವಾಗಿವೆ.ಭಾರಿ ಗಾಳಿ- ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಎಲ್ಲೆಂದರಲ್ಲಿ ಮರಗಳು ಬಿದ್ದು ಅನಾಹುತ ಸೃಷ್ಟಿಸಿದೆ. ಆನಂದ ಲಮಾಣಿ ಎಂಬವರ ಸೂಪರ್ ಮಾರ್ಕೆಟ್‍ನ ಚಾವಣಿ ತಗಡುಗಳು ಹಾರಿ ಹೋದ ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಹಾನಿಯಾಗಿದೆ.

ಮಾಸೂರ ರಸ್ತೆಯ ತ್ಯಾಗರಾಜ ಯಲಿವಾಳ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ರಾಮಪ್ಪ ದೇವರಮನೆಯವರ ದನದ ಕೊಟ್ಟಿಗೆ ಹಾಗೂ ಲಕ್ಷಾಂತರ ಮೌಲ್ಯದ ಮೆಸ್ ಹಾರಿ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ರಟ್ಟೀಹಳ್ಳಿ ತಾಲೂಕಿನಾದ್ಯಂತ ವಿದ್ಯುತ್‌ ಸಂಪರ್ಕ ಕಡಿತರಟ್ಟೀಹಳ್ಳಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆ ಗಾಳಿಗೆ 80ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಇದರಿಂದ ತಾಲೂಕಿನಾದ್ಯಂತ ವಿದ್ಯುತ್‌ ವ್ಯತ್ಯಯವಾಗಿತ್ತು. ತಾಲೂಕಿನ ಜನರು ಇಡೀ ರಾತ್ರಿ ವಿದ್ಯುತ್‌ ಇಲ್ಲದೇ ಪರದಾಡುವಂತಾಗಿತ್ತು.

ಭಾನುವಾರ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 80ಕ್ಕೂ ಹೆಚ್ಚು ಹಾಗೂ ನೂರಕ್ಕೂ ಹೆಚ್ಚು ಮರಗಳ ಬಿದ್ದು ಭಾರಿ ಅನಾಹುತ ಸೃಷ್ಟಿಯಾದ್ದರಿಂದ ಹೆಸ್ಕಾಂನ ಎಲ್ಲ ನೌಕರರು ಬಿದ್ದ ಕಂಬಗಳ ವಿದ್ಯುತ್ ಜಾಲಗಳನ್ನು ಪುನಃ ಸ್ಥಾಪಿಸಲು ಸಾಕಷ್ಟು ಸಮಯ ಬೇಕಾದ್ದರಿಂದ ಇಲಾಖೆಯೊಂದಿಗೆ ಸಹಕರಿಸಲು ಹೆಸ್ಕಾಂನ ಸಹಾಯಕ ಎಂಜಿನಿಯರ್‌ ನಾಗರಾಜ ಸೋಮಕ್ಕಳವರ ಮನವಿ ಮಾಡಿದರು.

ಸಹಾಯವಾಣಿ ಪ್ರಾರಂಭ

ಹಾವೇರಿ: ಜಿಲ್ಲೆಯಲ್ಲಿ ಪ್ರಸ್ತುತ ಪೂರ್ವ ಮುಂಗಾರಿನ ನಿರಂತರ ಗುಡುಗು ಸಿಡಿಲು ಸಹಿತ ಮಳೆ- ಗಾಳಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಾನಿಯಾಗುವ ರಸ್ತೆ, ಸೇತುವೆ, ಸಾರ್ವಜನಿಕರ ಆಸ್ತಿ, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಚಿತ ಸಹಾಯವಾಣಿ ಕೇಂದ್ರ(ಕಂಟ್ರೋಲ್ ರೂಮ್)ವನ್ನು ತೆರೆಯಲಾಗಿದೆ.08375 -249102(1077) ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ತಮ್ಮ ಅಹವಾಲು, ಸಮಸ್ಯೆಗಳನ್ನು ದಾಖಲಿಸಿ ತ್ವರಿತ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.