ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ.80ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 4.85 ಲಕ್ಷ ಕುಟುಂಬಗಳ ಪೈಕಿ ಈಗಾಗಲೇ 4 ಲಕ್ಷ ಮನೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಉಳಿದ ಮನೆಗಳ ಸಮೀಕ್ಷೆಯನ್ನು ಮುಂದಿನ ಎರಡು ದಿನಗಳೊಳಗಾಗಿ ಪೂರ್ಣಗೊಳಿಸಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುವುದು. ಅದಕ್ಕಾಗಿ 4543 ಬ್ಲಾಕ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಶೇ.100ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. ಅಲ್ಲದೇ ಶಿಕಾರಿಪುರದಲ್ಲಿ ಶೇ.೯೦ರಷ್ಟು ಗಣತಿ ಪೂರ್ಣಗೊಂಡಿದೆ. ಉಳಿದಂತೆ ಜಿಲ್ಲೆಯಾದ್ಯಂತ ಸಮೀಕ್ಷೆ ಪ್ರಗತಿ ಹಂತದಲ್ಲಿದೆ. ಸಮೀಕ್ಷೆಗೆ ಅಡಚಣೆಯಾಗುತ್ತಿರುವ ಕೆಲವು ಸ್ಥಳಗಳನ್ನು ಗುರುತಿಸಿ, ಸಮೀಕ್ಷೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಗಣತಿದಾರರು ಮನೆಮನೆ ಸಮೀಕ್ಷೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಿ ಎಂದು ಮನವಿ ಮಾಡಿದ ಅವರು, ಒತ್ತಾಯಪೂರ್ವಕವಾಗಿ ಮಾಹಿತಿ ಪಡೆದುಕೊಳ್ಳುವುದಿಲ್ಲ, ಸಮೀಕ್ಷೆಗೆ ಸರಿಯಾದ ಮಾಹಿತಿ ನೀಡಿದಲ್ಲಿ, ಸರ್ಕಾರದ ಯೋಜನೆಗಳ ಲಾಭ ಇನ್ನಷ್ಟು ಸಾರ್ವಜನಿಕರು ಪಡೆದುಕೊಳ್ಳಲು ಅನುಕೂಲವಾಗಲಿದೆ. ಇಲ್ಲದಿದ್ದಲ್ಲಿ ಮಾಹಿತಿ ನಿಖರವಾಗಿ ದಾಖಲಿಸಲಾಗದೆ ಸೌಲಭ್ಯಗಳಿಂದ ವಂಚಿತರಾಗಬಹುದಾದ ಸಂಭವವಿದೆ ಎಂದರು.
ಕೆಲವು ಸ್ಥಳಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ತಕ್ಷಣದ ಪರಿಹಾರ ಕಂಡುಕೊಂಡು ವಾಸಸ್ಥಳಕ್ಕೆ ಬಂದು ಸಮೀಕ್ಷೆ ಮಾಡಿ ಎಂದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳು ಬೇಡಿಕೆ ಇಟ್ಟಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ತಕ್ಷಣಕ್ಕೆ ಇತ್ಯರ್ಥಪಡಿಸಲು ಸಾಧ್ಯವಾಗದು. ಇದನ್ನು ಆದ್ಯತೆಯ ಮೇರೆಗೆ ಸಹಕರಿಸಲು ಗಮನಹರಿಸಲಾಗುವುದು. ಗ್ರಾಮೀಣರು ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.ಜಿ.ಪಂ ಸಿಇಓ ಎನ್.ಹೇಮಂತ್ ಕುಮಾರ್ ಮಾತನಾಡಿ, ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಕೆಲವು ಆಯ್ದ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಗಣತಿ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಸಮೀಕ್ಷೆಯನ್ನು ನಿಗದಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಪರ್ಯಾಯ ಕ್ರಮಗಳನ್ನು ಕೈಗೊಂಡಿದ್ದು, ಸಮೀಪದ ಗ್ರಾಮ ಪಂಚಾಯಿತಿ ಅಥವಾ ಶಾಲೆಗಳಲ್ಲಿ ನೆಟ್ವರ್ಕ್ ಸೌಲಭ್ಯವಿರುವ ಸ್ಥಳಗಳಲ್ಲಿ ದಾಖಲೆಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ. 250ಕ್ಕೂ ಹೆಚ್ಚಿನ ಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ನಡೆಸಲಾಗುತ್ತಿದೆ. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ಮತ್ತು ಇತರೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಅವರು ಉಪಸ್ಥಿತರಿದ್ದರು.