ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ರೋಟರಿ ಸಂಸ್ಥೆ ಹಾಗೂ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನಿಂದ ೮೦ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ೮೦೦ ಅಡಿ ಉದ್ದದ ತಿರಂಗಾ ಪ್ರದರ್ಶನ ಆಯೋಜಿಸಲಾಗಿತ್ತು. ನೂರಾರು ಮಕ್ಕಳು ತ್ರಿವರ್ಣ ಧ್ವಜ ಹಿಡಿದು ನಗರದ ವಿವಿಧ ರಸ್ತೆಗಳಲ್ಲಿ ಸಾಗಿಬಂದರು. ದಾರಿಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ತಿರಂಗಾ ಯಾತ್ರೆ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು.ನಗರದ ಶ್ರೀಕಾಳಿಕಾಂಬ ದೇವಾಲಯ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ಬೆಂಗಳೂರು-ಮೈಸೂರು ಹೆದ್ದಾರಿ, ವಾಣಿವಿಲಾಸ ರಸ್ತೆ, ನೂರಡಿ ರಸ್ತೆ, ಆರ್.ಪಿ ರಸ್ತೆ ಮೂಲಕ ಸಾಗಿದ ತಿರಂಗಾ ಯಾತ್ರೆ ಅಂತಿಮವಾಗಿ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ರೋಟರಿ ಶಾಲೆ, ಎಇಟಿ ನರ್ಸಿಂಗ್ ಕಾಲೇಜು, ಎಸ್‌ಎಲ್‌ಎನ್ ಕಾನ್ವೆಂಟ್ (ಸಾತನೂರು), ಡ್ಯಾಫೋಡಿಲ್ಸ್ ಶಾಲೆ, ಉನ್ನತಿ ಶಾಲೆ ವಿದ್ಯಾರ್ಥಿಗಳು ತಿರಂಗಾ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು.
ತಿರಂಗಾ ಯಾತ್ರೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಇಂದಿನ ಯುವಜನಾಂಗ ಸ್ವಾತಂತ್ರ್ಯದ ಮಹತ್ವವನ್ನು ಅರಿಯಬೇಕು. ವಿದ್ಯಾರ್ಥಿ ದೆಸೆಯಿಂದಲೇ ದೇಶಪ್ರೇಮವನ್ನು ಮೈಗೂಡಿಸಿಕೊಂಡು ರಾಷ್ಟ್ರಕ್ಕೆ ಏನಾದರೊಂದು ಕೊಡುಗೆ ನೀಡುವ ಸಂಕಲ್ಪ ಮಾಡಬೇಕು. ಸ್ವಾತಂತ್ರ್ಯವನ್ನು ದೇಶದ ಅಭ್ಯುದಯಕ್ಕೆ ಪೂರಕವಾಗಿ ಬಳಸಿಕೊಂಡಾಗ ಅದು ಅರ್ಥಪೂರ್ಣಗೊಳ್ಳುತ್ತದೆ ಎಂದರು.ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ಆಗಬೇಕು. ಯುವಕರು, ಮಕ್ಕಳಲ್ಲಿ ದೇಶ ಪ್ರೇಮದ ಒಲವನ್ನು ಮೂಡಿಸಬೇಕು. ಪಠ್ಯ, ಭಾಷಣದ ಮೂಲಕ ದೇಶಪ್ರೇಮವನ್ನು ಮಕ್ಕಳಿಗೆ ತಿಳಿಸಲು ಸಾಧ್ಯವಿಲ್ಲ. ತಿರಂಗಾ ಯಾತ್ರೆಯಂತಹ ಕಾರ್ಯಕ್ರಮಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನುಡಿದರು.
ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸುವ ಪುಣ್ಯದ ಕೆಲಸ ನಮಗಾಗಲೀ ಅಥವಾ ನಿಮಗಾಗಲೀ ಸಿಕ್ಕಿಲ್ಲ. ಆದರೆ, ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಕೆಲಸ ನಮ್ಮದಾಗಿದೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮಕ್ಕಳು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆಯನ್ನು ನೆನೆಯುತ್ತಾ ಅವರಂತೆಯೇ ವೀರ ಸೇನಾನಿಗಳಾಗಬೇಕು. ರಾಷ್ಟ್ರವನ್ನು ಕಟ್ಟುವ ಮತ್ತು ರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಹೊರಬೇಕು. ಆದರ್ಶ ಜೀವನವನ್ನು ನಡೆಸುವ ಮೂಲಕ ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮುವಂತೆ ಕಿವಿಮಾತು ಹೇಳಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ರೋಟರಿ ಸಂಸ್ಥೆಯ ರಾಮಲಿಂಗಯ್ಯ, ರಾಜಶೇಖರ್, ಲಕ್ಷ್ಮೀನಾರಾಯಣ್, ಸೋಮಶೇಖರ್, ಪ್ರಶಾಂತ್, ಮಂಜುನಾಥ್, ವಿನೋದ್, ಬರ್ನಾಡಪ್ಪ, ಪುಟ್ಟಸ್ವಾಮಿ, ಅರುಣ ಇತರರಿದ್ದರು.