ಸಾರಾಂಶ
ತಡರಾತ್ರಿ ಬಂದ ಗಾಳಿ-ಮಳೆಗೆ ಭತ್ತ ಸಂಪೂರ್ಣವಾಗಿ ತೊಯ್ದು ಹೋಗಿದೆ. ಫಸಲಿನ ಪದರು ಕಿತ್ತು ಹೊರ ಬಂದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ
ಕನಕಗಿರಿ: ೨೪ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ೮೦೦ ಕ್ವಿಂಟಲ್ ಭತ್ತದ ರಾಶಿ ಮಳೆಗೆ ತೊಯ್ದ ಘಟನೆ ಸಮೀಪದ ಭಟ್ಟರ ನರಸಾಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಭತ್ತದ ಮಾಲೀಕ ಬಸವರಾಜ ಕುರುಬರ ಅವರಿಗೆ ಲಕ್ಷಾಂತರ ಹಾನಿಯಾಗಿದೆ.ಕಳೆದ ಮೂರ‍್ನಾಲ್ಕು ದಿನಗಳಿಂದ ಭತ್ತ ಕಟಾವು ಮಾಡಿ ಫಸಲನ್ನು ಒಣ ಹಾಕಲಾಗಿತ್ತು. ಶುಕ್ರವಾರ ತಡರಾತ್ರಿ ಬಂದ ಗಾಳಿ-ಮಳೆಗೆ ಭತ್ತ ಸಂಪೂರ್ಣವಾಗಿ ತೊಯ್ದು ಹೋಗಿದೆ. ಫಸಲಿನ ಪದರು ಕಿತ್ತು ಹೊರ ಬಂದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಹೀಗೆ ಹಾಳಾಗಿರುವ ಫಸಲನ್ನು ಉಳಿಸಿಕೊಳ್ಳುವುದಕ್ಕಾಗಿ ರೈತ ಬಸವರಾಜಪ್ಪ ₹೮೦ ಸಾವಿರ ಖರ್ಚು ಮಾಡಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ತಂದು ಒಣಗಿಸಲು ಮುಂದಾಗಿದ್ದಾರೆ. ೮೦೦ ಕ್ವಿಂಟಲ್ ಭತ್ತ ಟ್ರ್ಯಾಕ್ಟರ್ ಸಹಾಯದಿಂದ ಎಪಿಎಂಸಿ ಪ್ರಾಂಗಣದಲ್ಲಿ ಒಣ ಹಾಕುವ ಕಾರ್ಯ ನಡೆಯುತ್ತಿದೆ. ಶನಿವಾರ ಬೆಳಗಿನ ಜಾವದಿಂದ ಸಂಜೆವರೆಗೂ ಟ್ರ್ಯಾಕ್ಟರ್‌ನಲ್ಲಿ ಭತ್ತವನ್ನು ತಂದು ಒಣಗಿಸಲು ಹಾಕುತ್ತಿದ್ದರು.ಕಳೆದ ತಿಂಗಳಿಂದ ವರುಣನ ಅರ್ಭಟದಿಂದ ಜಿಲ್ಲೆಯಾದ್ಯಂತ ಭತ್ತದ ಬೆಳೆ, ಮನೆಗಳ ಮೇಲ್ಚಾವಣಿ, ಜೀವ ಹಾನಿಯಾಗಿವೆ. ಇದೀಗ ಒಣ ಹಾಕಿರುವ ಭತ್ತವು ಮಳೆಗೆ ಸಂಪೂರ್ಣವಾಗಿ ತೊಯ್ದು ಲಕ್ಷಾಂತರ ಹಾನಿಯಾಗಿದ್ದು, ರೈತರ ನೆರವಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಬಂದು ಪರಿಹಾರ ನೀಡಬೇಕಿದೆ.
೧೦ ಎಕರೆ ಭೂಮಿಯ ಜತೆಗೆ ಇನ್ನೂ ೧೮ ಎಕರೆ ಭೂಮಿ ಗುತ್ತಿಗೆ ಪಡೆದು ಬೆಳೆದಿದ್ದ ೮೦೦ ಕ್ವಿಂಟಲ್ ಭತ್ತ ಮಳೆಗೆ ತೊಯ್ದು ಹೋಗಿದ್ದು, ಲಕ್ಷಾಂತರ ಹಾನಿಯಾಗಿದೆ. ತೊಯ್ದ ಭತ್ತ ಒಣಗಿಸುವ ಕೆಲಸ ಮಾಡುತ್ತಿದ್ದೇನೆ. ಹಾಗೇ ಬಿಟ್ಟರೆ ನನಗೆ ಏನೂ ಸಿಗುವುದಿಲ್ಲ. ಇದ್ದಷ್ಟು ಭತ್ತ ಒಣಗಿಸಿ ಮಾಡಿರುವ ಸಾಲ ತೀರಿಸುವೆ ಎಂದು ಹಾನಿಗೊಳಗಾದ ರೈತ ಬಸವರಾಜಪ್ಪ ಕುರುಬರ ಹೇಳಿದರು.