ಕನ್ನಡಪ್ರಭ ವಾರ್ತೆ ಹಾಸನ
ದೇಶಭಕ್ತಿ, ಸಂಭ್ರಮ ಹಾಗೂ ಅಭಿವೃದ್ಧಿಯ ಸಂಕಲ್ಪಕ್ಕೆ ಸಾಕ್ಷಿಯಾಗಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದ ಹಾಕಿ ಮೈದಾನದಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮೊದಲ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಸಚಿವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ವಂದೇ ಮಾತರಂ ಗೀತೆಗೆ ೧೫೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಂದೇ ಮಾತರಂ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆಗಳ ಗಾಯನ ನಡೆಯಿತು. ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಭದ್ರತಾ ಪಡೆಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡೆಸಿದ ಆಕರ್ಷಕ ಪಥಸಂಚಲನ ನೆರೆದಿದ್ದವರ ಗಮನ ಸೆಳೆಯಿತು.ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಸಚಿವ ಶಿವಲಿಂಗೇಗೌಡ, ಬ್ರಿಟಿಷರ ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಸಾವಿರಾರು ದೇಶಪ್ರೇಮಿಗಳು ನಡೆಸಿದ ಹೋರಾಟದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆದಿದೆ. ಮಹಾತ್ಮ ಗಾಂಧೀಜಿ, ನೆಹರು, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ತ್ಯಾಗವನ್ನು ಇಂದಿನ ಪೀಳಿಗೆ ಸದಾ ಸ್ಮರಿಸಬೇಕು ಎಂದರು. ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಕೊಡುಗೆಯನ್ನೂ ಸಚಿವರು ನೆನಪಿಸಿಕೊಂಡರು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಾಸನ ಜಿಲ್ಲೆಯ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಕೃಷಿ ಪರಿಸ್ಥಿತಿಯ ಬಗ್ಗೆಯೂ ಸಚಿವರು ಕಳವಳ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಹಲವು ತಾಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಅರಕಲಗೂಡು, ಹೊಳೆನರಸೀಪುರ, ಹಾಸನ, ಅರಸೀಕೆರೆ ಸೇರಿದಂತೆ ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಹಿನ್ನಡೆ ಕಂಡಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ೨.೮೬ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದರೂ ಇದುವರೆಗೆ ೯೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆಯಾಗಿ ರಾಗಿ ಬೆಳೆಯುವಂತೆ ಸಲಹೆ ನೀಡಲಾಗಿದೆ ಎಂದರು. ಬಿಳಿಸುಳಿ ರೋಗದಿಂದ ಮೆಕ್ಕೆಜೋಳಕ್ಕೆ ಭಾರಿ ಹಾನಿ
ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳಕ್ಕೂ ಬಿಳಿಸುಳಿ ರೋಗದ ಆತಂಕ ಎದುರಾಗಿದೆ. ಸುಮಾರು ೪೫,೮೮೬ ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಬೆಳೆ ಹಾನಿಗೊಳಗಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಫಸಲ್ ಭೀಮಾ ಯೋಜನೆಯಡಿ ಮಧ್ಯಂತರ ಬೆಳೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು. ಅರಸೀಕೆರೆ ತಾಲೂಕಿನಲ್ಲಿ ಬಿತ್ತನೆ ವೈಫಲ್ಯಕ್ಕೆ ಬೆಳೆ ವಿಮೆ ಪರಿಹಾರ ಕಲ್ಪಿಸುವ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಿಂದ ೧.೮೮ ಲಕ್ಷಕ್ಕೂ ಅಧಿಕ ಬೆಳೆ ವಿಮೆ ಅರ್ಜಿಗಳು ಸ್ವೀಕರಿಸಿರುವುದು ರೈತರಲ್ಲಿ ವಿಮೆ ಕುರಿತು ಹೆಚ್ಚಿದ ಜಾಗೃತಿಗೆ ಸಾಕ್ಷಿಯಾಗಿದೆ ಎಂದರು.ಹಾಲು ಉತ್ಪಾದನೆಯಲ್ಲಿ ಹಾಸನ ನಂಬರ್ ಒನ್ಹಾಸನ ಜಿಲ್ಲೆ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲೂ ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ ೧೩ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರಾಜ್ಯದಲ್ಲೇ ಹಾಸನ ಮೊದಲ ಸ್ಥಾನದಲ್ಲಿದೆ ಎಂದು ಸಚಿವರು ಹೆಮ್ಮೆಯಿಂದ ಹೇಳಿದರು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ?೫ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಪ್ರತಿ ತಿಂಗಳು ಸರಾಸರಿ ?೧೯ರಿಂದ ?೨೦ ಕೋಟಿ ಪ್ರೋತ್ಸಾಹಧನ ರೈತರಿಗೆ ದೊರೆಯುತ್ತಿದೆ ಎಂದರು.ಇದರೊಂದಿಗೆ ರಣಘಟ್ಟ ಕೆರೆ ತುಂಬಿಸುವ ಯೋಜನೆ, ಕಾಚೇನಹಳ್ಳಿ ಏತ ನೀರಾವರಿ ಮೂರನೇ ಹಂತ, ರಂಗೇನಹಳ್ಳಿ ಏತ ನೀರಾವರಿ, ದುದ್ದ-ಶಾಂತಿಗ್ರಾಮ ಕೆರೆ ತುಂಬಿಸುವ ಯೋಜನೆ ಹಾಗೂ ಹಿರೀಸಾವೆ ಹೋಬಳಿ ಕೆರೆ ತುಂಬಿಸುವ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.‘ಸಾಮಾಜಿಕ ನ್ಯಾಯ, ಸಮಾನ ಅವಕಾಶ ಹಾಗೂ ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಗುರಿ. ರೈತರು, ಮಹಿಳೆಯರು, ಯುವಕರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜನರ ಸಹಕಾರದೊಂದಿಗೆ ಹಾಸನ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಆಶಯದಂತೆ ಸಮೃದ್ಧ, ಶಾಂತಿಯುತ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡುವ ಮೂಲಕ ಸಚಿವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶವನ್ನು ಮುಕ್ತಾಯಗೊಳಿಸಿದರು. ಕೊನೆಯಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಿದರು. ಪಥ ಸಂಚಲನದಲ್ಲಿ ಉತ್ತಮವಾದ ತಂಡಗಳ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯತ್ ಸಿಇಓ ಶುಭಂ ಶುಕ್ಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ತಹಸೀಲ್ದಾರ್ ಗೀತಾ, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಆರ್. ರಂಜಿತ್ ಗೊರೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.