82 ವರ್ಷದ ಅಜ್ಜ, 75 ವರ್ಷದ ಅಜ್ಜಿಗೆ ನರೇಗಾ ಆಸರೆ!

| Published : Apr 25 2025, 11:50 PM IST

ಸಾರಾಂಶ

ಇಳಿವಯಸ್ಸಿನಲ್ಲೂ ವೃದ್ಧ ದಂಪತಿ ಜೋಡಿಯೊಂದು ನರೇಗಾ ಯೋಜನೆಯ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರಾಗಿ ಭಾಗವಹಿಸುವ ಮೂಲಕ ಸ್ವಾವಲಂಬಿ ಜೀವನಕ್ಕೆ ಮಾದರಿಯಾಗಿದ್ದಾರೆ.

ಮುಂಡರಗಿ: ಇಳಿವಯಸ್ಸಿನಲ್ಲೂ ವೃದ್ಧ ದಂಪತಿ ಜೋಡಿಯೊಂದು ನರೇಗಾ ಯೋಜನೆಯ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರಾಗಿ ಭಾಗವಹಿಸುವ ಮೂಲಕ ಸ್ವಾವಲಂಬಿ ಜೀವನಕ್ಕೆ ಮಾದರಿಯಾಗಿದ್ದಾರೆ. ಮುಂಡರಗಿ ತಾಲೂಕಿನ ಬಿದರಹಳ್ಳಿ ಗ್ರಾಮ‌ ಪಂಚಾಯತ ವ್ಯಾಪ್ತಿಯ ಮುಂಡವಾಡ ಗ್ರಾಮದ 82 ವರ್ಷದ ಶಂಕರಪ್ಪ ಕೂಬಿಹಾಳ, 74 ವರ್ಷದ ಶಂಕರಮ್ಮ ಕೂಬಿಹಾಳ ದಂಪತಿ ಇಳಿವಯದಲ್ಲೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಮುದಾಯ ಬದು ನಿರ್ಮಾಣ ಕಾಮಗಾರಿ, ನಾಲಾ ಹೂಳೆತ್ತುವುದು, ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಜತೆಯಾಗಿಯೇ ಭಾಗವಹಿಸಿ ಯುವಜನತೆ ನಾಚುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆ ಮೂಲಕ ನರೇಗಾ ಕೂಲಿ ಮೊತ್ತದಿಂದ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಎರಡು ಎಕರೆ ಖುಷ್ಕಿ ಕೃಷಿಭೂಮಿಯಲ್ಲಿ, ಬೇರೆ ರೈತರ ಜಮೀನುಗಳಲ್ಲಿ ದುಡಿಯುವ ಈ ದಂಪತಿ ಬೇಸಿಗೆ ಕಾಲದಲ್ಲಿ ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ‌.ಈ ಇಳಿವಯದಲ್ಲೂ ಕುಗ್ಗದ ಉತ್ಸಾಹದೊಂದಿಗೆ ಈ ಜೋಡಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರನ್ನೂ ಮದುವೆ ಮಾಡಿ ಕೊಟ್ಟಿರುವ ಈ ಹಿರಿಯ ದಂಪತಿ ಎಲ್ಲ ಕೆಲಸಗಳಲ್ಲೂ ಜೊತೆಯಾಗಿಯೇ ಹೋಗುತ್ತಾರೆ. ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ನಿಮ್ಮ ಈ ಉತ್ಸಾಹದ ಗುಟ್ಟೇನು ಎಂದು ಪ್ರಶ್ನಿಸಿದರೆ ದಿನಂಪ್ರತಿ ಜೋಳದ ರೊಟ್ಟಿ ಊಟ, ನಿತ್ಯವೂ ಮೈ ಬಗ್ಗಿಸಿ ದುಡಿಯುವುದು ಕಾರಣ ಎಂದು ನಗುತ್ತಾರೆ.

ಐವತ್ತು ಅರವತ್ತು ವಯಸ್ಸಿಗೆ ಜನರು ಆರೋಗ್ಯದ ವಿಚಾರದಲ್ಲಿ ಹೆಚ್ಚು ಹೈರಾಣಾಗುವ ಇಂದಿನ ದಿನಮಾನಗಳಲ್ಲಿ ಈ ದಂಪತಿ ಬಳಿ ಯಾವುದೇ ಕಾಯಿಲೆ ಸುಳಿದಿಲ್ಲ. ಕಿವಿಗಳು ಸ್ಪಷ್ಟವಾಗಿ ಕೇಳುತ್ತವೆ. ಕಣ್ಣುಗಳು ನಿಚ್ಚಳವಾಗಿ ಕಾಣಿಸುತ್ತವೆ. ಕೂಲಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಆ ಮೂಲಕ ನರೇಗಾ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಇರುವ ಅರ್ಧ ಕೆಲಸ ಪೂರ್ಣ ಕೂಲಿ ಎಂಬ ನಿಯಮವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಯುವಕರು ನಾಚುವಂತೆ ಕಷ್ಟಪಟ್ಟು ಕೆಲಸ ನಿರ್ವಹಿಸಿ ನರೇಗಾ ಕೂಲಿಮೊತ್ತದಿಂದ ಇಳಿವಯಸ್ಸಿನಲ್ಲಿ ಯಾರನ್ನು ನೆಚ್ಚಿಕೊಳ್ಳದೆ ತಮ್ಮ ದುಡಿಮೆಯಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.ಮುಂಡರಗಿ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಾ ಅನೇಕರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಗುಳೆ ಹೋಗುವುದನ್ನು ತಪ್ಪಿಸುವುದರ ಜೊತೆಗೆ ಇಂತಹ ಹಿರಿಯ ನಾಗರಿಕರು ಯೋಜನೆಯ ಕಾಮಗಾರಿ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವುದು ಮಾದರಿ ಎಂದು ಮುಂಡರಗಿ ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.ದುಡಿಮೆಯೇ ದುಡ್ಡಿನ‌ ತಾಯಿ ರೀ. ಬ್ಯಾಸಗಿಯೊಳಗ ನಾವು ತಪ್ಪದ ನರೇಗಾ ಕಾಮಗಾರಿಯೊಳಗ ಭಾಗವಹಿಸ್ತೀವಿ. ಇದು ನಮ್ಮ ದುಡಿತಕ್ಕ ಭಾಳ ಅನುಕೂಲ ಆಗ್ಯೇದ. ಸುಮಾರು ಹತ್ತ ವರ್ಷ ಆಗಿರಬೇಕ್ ರಿ ನಾವು ಹಿಂಗ ನರೇಗಾ ಮೂಲಕ ದುಡಕೋತ ಬಂದು. ನರೇಗಾ ಕೆಲಸ ಇಲ್ದಾಗ ನಮ್ಮ ಹಾಗೂ ಮಂದಿ ಹೊಲ್ದಾಗ ಜೊತಿಯಾಗಿ ದುಡಿತಿವ್ರಿ ದಂಪತಿ ಶಂಕರಪ್ಪ ಕೂಬಿಹಾಳ, ಶಂಕರವ್ವ ಕೂಬಿಹಾಳ ಹೇಳಿದರು.