ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ನೀಗಿಸುವ ಸಲುವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯಸರ್ಕಾರ ಆರಂಭಿಸಿದ ಯೋಜನೆ ತಾಲೂಕಿನ ಆಲಕೆರೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದವರ ಪೈಕಿ ೮೪ ಮಕ್ಕಳು ಶಾಲೆಯನ್ನೇ ತೊರೆಯುವಂತೆ ಮಾಡಿದೆ.ಕೇವಲ ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೊಟ್ಟೆ ಬೇಡ ಎನ್ನುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಯೋಜನಾಧಿಕಾರಿ ಸೇರಿದಂತೆ ಯಾರೊಬ್ಬರ ಮನವಿಗೂ ಸ್ಪಂದಿಸದೆ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗಳಿಗೆ ದಾಖಲು ಮಾಡಿದ್ದಾರೆ.
ಆಲಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೧೨೪ ಮಕ್ಕಳು ಹಾಗೂ ಎಲ್‌ಕೆಜಿ ಮತ್ತು ಯುಕೆಜಿಯಿಂದ ೨೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಹಿಂದಿನಿಂದಲೂ ಮಕ್ಕಳಿಗೆ ಶಾಲಾ ಕಟ್ಟಡವಿರುವ ೧೦೦ ಮೀಟರ್ ಅಂತರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯವಿದೆ ಎನ್ನುವ ಕಾರಣಕ್ಕೆ ಮೊಟ್ಟೆ ನೀಡುವ ಬದಲು ಬಾಳೆಹಣ್ಣನ್ನು ನೀಡಲಾಗುತ್ತಿತ್ತು.ಪ್ರಸ್ತುತದಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲೇಬೇಕೆಂದು ಕೆಲವರು ಹೇಳುತ್ತಿದ್ದರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಗ್ರಾಮದಲ್ಲಿನ ಸಸ್ಯಾಹಾರಿ ಪೋಷಕರು ಶಾಲೆಯಲ್ಲಿ ಮೊಟ್ಟೆ ನೀಡುವುದಾದರೆ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಇವರ ಮನವೊಲಿಸಲು ಅಧಿಕಾರಿಗಳ ಪ್ರಯತ್ನ ಫಲ ನೀಡಿಲ್ಲ. ನಂತರದಲ್ಲಿ ೮೦ಕ್ಕೂ ಹೆಚ್ಚು ಮಕ್ಕಳ ಪಾಲಕರು ವರ್ಗಾವಣೆ ಪತ್ರ ಕೊಡುವಂತೆ ಮುಖ್ಯ ಶಿಕ್ಷಕರಿಗೆ ಮನವಿ ಸಲ್ಲಿಸಿದ್ದರು.
ಸರ್ಕಾರದ ಆದೇಶವಿದೆ ಎನ್ನುವ ಕಾರಣಕ್ಕೆ ಬಾಳೆ ಹಣ್ಣನ್ನು ಹಿಂದಿನಿಂದಲೂ ಕೊಡುತ್ತಿದ್ದೆವು, ಈಗ ಕೇವಲ ನಾಲ್ಕು ಜನರು ಮಕ್ಕಳಿಗೆ ಮೊಟ್ಟೆ ಬೇಕೆನ್ನುವುದನ್ನೇ ಪರಿಗಣಿಸುವುದರಿಂದ ನಾವು ಕೀಲಾರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ನನ್ನ ಎರಡು ಮಕ್ಕಳನ್ನು ದಾಖಲು ಮಾಡಿದ್ದೇವೆ. ಮೊಟ್ಟೆ ತಿನ್ನುವುದನ್ನು ನಾವು ವಿರೋಧಿಸುವುದಿಲ್ಲ. ಈ ಸ್ಥಳದ ಸಮೀಪದಲ್ಲೇ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯ ಇರುವುದರಿಂದ ಇಲ್ಲಿ ಮೊಟ್ಟೆ ಬೇಯಿಸುವುದರಿಂದ ಅದರ ಆಚಾರ- ವಿಚಾರಕ್ಕೆ ಅಡೆತಡೆಯಾಗಿರುವುದರಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಎಸ್‌ಡಿಎಂಸಿ ಸದಸ್ಯ ಚಂದ್ರು ಆಲಕೆರೆ ಹೇಳಿದರು.ಎಲ್‌ಕೆಜಿಯಿಂದ ಏಳನೇ ತರಗತಿ ಇರುವ ಆಲಕೆರೆ ಶಾಲೆಯಲ್ಲಿ ೧ ರಿಂದ ೭ರ ವರೆಗೆ ೧೨೪ ಮಕ್ಕಳು ಹಾಗೂ ಎಲ್‌ಕೆಜಿ ಮತ್ತು ಯುಕೆಜಿವರೆಗೆ ೨೮ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದುವರೆಗೆ ಒಟ್ಟು ೪೪ ಮಕ್ಕಳನ್ನು ಕೀಲಾರ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದಾರೆ. ಇನ್ನೂ ೪೦ ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ದಾಖಲಾಗಿದ್ದಾರೆ.
ಈಗಾಗಲೇ ಶಾಲೆಯಲ್ಲಿ ಮೊಟ್ಟೆ ಬೇಯಿಸುವ ಮೂಲಕ ಅಪವಿತ್ರ ಮಾಡಿದ್ದಾರೆ. ಹಾಗಾಗಿ ನಾವು ಪುನಃ ಆ ಶಾಲೆಗೆ ಮಕ್ಕಳನ್ನು ಸೇರಿಸುವುದಿಲ್ಲ, ಇದರಿಂದ ತೊಂದರೆ ಆದರೂ ಪರವಾಗಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಬೇಸರ ಹೊರಹಾಕಿದ್ದಾರೆ.----
ಮುಖ್ಯ ಶಿಕ್ಷಕ ಕಣ್ಣೀರು..!‘ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ಮೊಟ್ಟೆ ವಿತರಣೆ ಮಾಡಿರಲಿಲ್ಲ. ಆದರೆ, ಸರ್ಕಾರದ ನಿಯಮದಂತೆ ಒಂದು ಮಗು ಮೊಟ್ಟೆ ಕೇಳಿದರೂ ಕೊಡಲೇಬೇಕು. ಮಕ್ಕಳನ್ನು ಶಾಲೆ ಬಿಡಿಸದಂತೆ ಪೋಷಕರಿಗೆ ಸಾಕಷ್ಟು ಮನವೊಲಿಸಿದೆವು. ಆದರೆ ಪೋಷಕರು ಅದಕ್ಕೆ ಒಪ್ಪದೆ ಮಕ್ಕಳನ್ನು ಮತ್ತೊಂದು ಶಾಲೆಗೆ ಸೇರಿಸಿದ್ದಾರೆ. ಶಾಲಾ ಆವರಣ ಬಿಕೋ ಎನ್ನುತ್ತಿದೆ. ಮಕ್ಕಳನ್ನು ಶಾಲೆ ಬಿಡಿಸಿದ್ದು ತುಂಬಾ ನೋವುಂಟು ಮಾಡಿದೆ.’ಜಯರಾಮ್, ಮುಖ್ಯ ಶಿಕ್ಷಕ.