ಸಾರಾಂಶ
ರಾಮನಗರ: ಕೆಲವೆಡೆ ಮತಯಂತ್ರಗಳ ಅದಲು ಬದಲು, ಮತದಾರರಿಗೆ ಹಣ ಹಂಚಿಕೆ, ಕಾರ್ಯಕರ್ತರ ಮಾತಿನ ಚಕಮಕಿಯಂತಹ ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆದಿದ್ದು, ಪ್ರಾಥಮಿಕ ವರದಿ ಪ್ರಕಾರ ಅಂದಾಜು ಶೇ 88.81 ಮತದಾನ ಆಗಿದೆ.
ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ.85.27 ರಷ್ಟು ಮತದಾನ ನಡೆಯುತಿತ್ತು. ಈಗ ಉಪಚುನಾವಣೆಯಲ್ಲಿ ಶೇ 88.81 ಮತದಾನ ಆಗಿದೆ.ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳ ನಾಯಕರು ಅಭ್ಯರ್ಥಿಗಳೊಂದಿಗೆ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲದೆ, ಚುನಾವಣಾ ಆಯೋಗವೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಕುರಿತು ಅರಿವು ಮೂಡಿಸಿತು. ಇದರ ಫಲವಾಗಿ ಮತದಾರರನ್ನು ಮತಗಟ್ಟೆಗೆ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಮತದಾನದ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಂಡಾಗ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಒತ್ತಡಕ್ಕೆ ಮಣಿದು ಮತದಾರರು ಮತ ಚಲಾಯಿಸಿದ ನಿದರ್ಶನಗಳಿವೆ.ಬೆಳಗ್ಗೆ 9ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ 10.34 ರಷ್ಟು ಮತದಾನ ನಡೆದಿತ್ತು. ಬೆಳಗ್ಗೆ 11 ಗಂಟೆ ವೇಳೆ 31,160 ಪುರುಷರು , 31,781 ಮಹಿಳೆಯರು ಸೇರಿ ಒಟ್ಟು 62,941 ಮಂದಿ ಹಕ್ಕು ಚಲಾಯಿಸಿದ್ದರು, ಅಂದರೆ ಶೇ.27.02ರಷ್ಟು ಮತದಾನವಾಗಿತ್ತು.
ಮೋಡ ಮುಸುಕಿದ ವಾತಾವರಣ ಇದ್ದಿದ್ದರಿಂದ ಮತದಾರರು ಮತಗಟ್ಟೆಗೆ ಉತ್ಸಾಹದಿಂದಲೇ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೆಳಗ್ಗೆ 11 ಗಂಟೆಗೆ ಶೇ 27.02 ರಷ್ಟಿದ್ದ ಮತದಾನ ಮಧ್ಯಾಹ್ನ 1 ಗಂಟೆ ವೇಳೆಗೆ 51,298 ಪುರುಷರು, 60,867 ಮಹಿಳೆಯರು ಸೇರಿ ಒಟ್ಟು 1,12,165 ಮಂದಿ ಹಕ್ಕು ಚಲಾಯಿಸಿದ್ದರಿಂದ ಮತದಾನ ಶೇ.48.15 ರಷ್ಟಾಗಿತ್ತು.ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 67.63ರಷ್ಟು ಮತದಾನ ನಡೆದಿತ್ತು. ಬೆಳಗ್ಗೆಯಿಂದಲೇ ಬಿರುಸಿನಿಂದ ಸಾಗಿದ ಮತದಾನ ಮಧ್ಯಾಹ್ನದ ನಂತರ ಮತ್ತಷ್ಟು ಚುರುಕು ಪಡೆದುಕೊಂಡಿತು. ಸಂಜೆ 5 ಗಂಟೆ ವೇಳೆಗೆ ಶೇ 84.29ರಷ್ಟು ಮತದಾನವಾಗಿತ್ತು.
ಮತದಾರರು ಅಭ್ಯರ್ಥಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಎಲ್ಲಾ ಅಭ್ಯರ್ಥಿಗಳ ಹೆಸರುಗಳ ನಂತರದ ನೋಟಾ (ಮೇಲ್ಕಂಡ ಯಾರು ಅಲ್ಲ) ಮುದ್ರಿತವಾಗಿತ್ತು. 31 ಅಭ್ಯರ್ಥಿಗಳಿದ್ದ ಕಾರಣ ಎಲ್ಲ ಮತಗಟ್ಟೆಗಳಲ್ಲಿ ಎರಡು ಮತಯಂತ್ರಗಳನ್ನು ಇಡಲಾಗಿತ್ತು. ಆದರೆ, ಮಂಗಳವಾರ ಪೇಟೆ ಮತಗಟ್ಟೆಯಲ್ಲಿ ಮತಯಂತ್ರಗಳು ಅದಲು ಬದಲಾಗಿತ್ತು. ಮಧ್ಯಾಹ್ನದ ನಂತರ ಅಧಿಕಾರಿಗಳು ಆ ಮತಯಂತ್ರಗಳನ್ನು ಸರಿಪಡಿಸಿದರು.ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳ ಹಣೆ ಬರಹ ನ.23ರವರೆಗೆ ಮತಯಂತ್ರಗಳಲ್ಲಿ ಭದ್ರವಾಗಿರುತ್ತದೆ.
13ಕೆಆರ್ ಎಂಎನ್ 1,2,3,4,5.ಜೆಪಿಜಿ1.ಚಕ್ಕರೆಯ ಮತಗಟ್ಟೆ ಸಂಖ್ಯೆ 167ನಲ್ಲಿ ಮತದಾನ ಮಾಡಲು 85 ವರ್ಷದ ವೃದ್ದೆ ಗೌರಮ್ಮ ವೀಲ್ ಚೇರ್ ನಲ್ಲಿ ಆಗಮಿಸಿ ಮತದಾನ ಮಾಡಿದರು.
2.ಚಕ್ಕರೆ ಮತಗಟ್ಟೆಯಲ್ಲಿ ಮತದಾರರು ಸಾಲುಗಟ್ಟಿ ನಿಂತಿರುವುದು3.ಸೈಯದ್ ವಾಡಿ ಮತಗಟ್ಟೆಯಲ್ಲಿ ಮತದಾರರು ಸಾಲುಗಟ್ಟಿ ನಿಂತಿರುವುದು
4.ಅಕ್ಕೂರು ಮತಗಟ್ಟೆ 221ರಲ್ಲಿ ಮತಚಲಾಯಿಸಲು 65 ವರ್ಷದ ಗೌರಮ್ಮ ರವರು ವೀಲ್ ಚೇರ್ ನಲ್ಲಿ ಆಗಮಿಸಿದರು.5. ಕೊಡಂಬಳ್ಳಿಯ ಮತಗಟ್ಟೆ ಸಂಖ್ಯೆ 236ರಲ್ಲಿ ಹಕ್ಕು ಚಲಾಯಿಸಲು 90 ವರ್ಷದ ಜಯಮ್ಮ ಹಾಗೂ 85 ವರ್ಷದ ಚಿಕ್ಕಮ್ಮ ಆಗಮಿಸಿದ್ದರು.