ಹನುಮಸಾಗರ ಗ್ರಾಮದ ಆರಾಧ್ಯದೇವತೆ ಶ್ರೀ ಅಂಬಾಭವಾನಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ 89ನೇ ವಾರ್ಷಿಕೋತ್ಸವದ ಅಂಗವಾಗಿ ಜು. 7ರಂದು ದೇಗುಲದಲ್ಲಿ ಸಾಮೂಹಿಕ ವಿವಾಹ, ಸಾಮೂಹಿಕ ಉಪನಯನ, ಯಾತ್ರಿ ನಿವಾಸ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ ಸನ್ಮಾನ ಸಮಾರಂಭ ವೈಭವದಿಂದ ನಡೆಯಲಿದೆ.

ಏಕನಾಥ ಜಿ. ಮೆದಿಕೇರಿ

ಹನುಮಸಾಗರ: ಹನುಮಸಾಗರ ಗ್ರಾಮದ ಆರಾಧ್ಯದೇವತೆ ಶ್ರೀ ಅಂಬಾಭವಾನಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ 89ನೇ ವಾರ್ಷಿಕೋತ್ಸವದ ಅಂಗವಾಗಿ ಜು. 7ರಂದು ದೇಗುಲದಲ್ಲಿ ಸಾಮೂಹಿಕ ವಿವಾಹ, ಸಾಮೂಹಿಕ ಉಪನಯನ, ಯಾತ್ರಿ ನಿವಾಸ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ ಸನ್ಮಾನ ಸಮಾರಂಭ ವೈಭವದಿಂದ ನಡೆಯಲಿದೆ.

ಜೂ. 29ರಿಂದಲೇ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಪ್ರತಿದಿನ ವಿಶೇಷ ಪೂಜೆ, ಹೋಮ-ಹವನ, ಅಭಿಷೇಕ, ಕುಂಕುಮಾರ್ಚನೆ, ಪ್ರವಚನ ಹಾಗೂ ಧಾರ್ಮಿಕ ಆಚರಣೆಗಳು ಭಕ್ತಿಭಾವದಿಂದ ಜರುಗಿವೆ. ವಾರ್ಷಿಕೋತ್ಸವದ ಸಮಾರೋಪದ ದಿನವಾದ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ.

ಉಡುಪಿ ಪುತ್ತಿಗೆ ಮಠದ ಡಾ. ಬಿ. ಗೋಪಾಲಾಚಾರ್ಯ ಸಾನ್ನಿಧ್ಯ ವಹಿಸಲಿದ್ದು, ಧಾರ್ಮಿಕ ವಿಧಿ-ವಿಧಾನಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅಂಬಾಭವಾನಿ ಭವನ ಯಾತ್ರಿ ನಿವಾಸ ಕಟ್ಟಡವನ್ನು ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಉದ್ಘಾಟಿಸುವರು. ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಕಾರ್ಯಕ್ರಮ ಉದ್ಘಾಟಿಸುವರು. ಸ್ಥಳೀಯ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಭಗೀರಥಸಾ ಪಾಟೀಲ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಎಸ್‌ಪಿ ಡಾ. ರಾಮ್ ಎಲ್. ಅರಸಿದ್ಧಿ, ಎಂಎಲ್‌ಸಿ ಶರಣಗೌಡ ಪಾಟೀಲ, ಶ್ರೀನಿವಾಸ ಹರಿಸಾ ಖೋಡೆ, ವಿಠಲಸಾ ನಗರಿ, ಗೋಪಿನಾಥಸಾ ಮಲಜಿ ಭಾಗವಹಿಸಲಿದ್ದಾರೆ ಎಂದು ಎಸ್ಎಸ್‌ಕೆ ಸಮಾಜ ವಿಶ್ವಸ್ಥ ಟ್ರಸ್ಟ್ ತಿಳಿಸಿದೆ.

89 ವರ್ಷಗಳ ಇತಿಹಾಸ: ಹನುಮಸಾಗರದ ಅಂಬಾಭವಾನಿ ದೇವಸ್ಥಾನವು ಸುಮಾರು ಒಂಬತ್ತು ದಶಕಗಳ ಇತಿಹಾಸ ಹೊಂದಿದೆ. 1926ರಲ್ಲಿ ಶ್ರೀ ಜಗದಂಬಾ ದೇವಿಯ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 1937ರ ಜು. 1ರಂದು ಶ್ರೀದೇವಿಯ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಆಗಿನ ಎಸ್.ಎಸ್.ಕೆ. ಸಮಾಜದ ಮುಖಂಡರಾದ ರಾಮಕೃಷ್ಣಸಾ ತಿಪ್ಪಣಸಾ ಪಾಟೀಲ, ಭುಜಂಗಸಾ ಸಿಂಗ್ರಿ, ಗಣಪತಿಸಾ ಬಸ್ವಾ, ಹನುಮಂತಸಾ ರಾಯಬಾಗಿ (ತುಳಸಿಕಟ್ಟಿ), ನಾರಾಯಣಸಾ ರಾಜಣಸಾ ಬಸ್ಸಾ (ದಫೇದಾರ) ಸೇರಿದಂತೆ ಅನೇಕ ಹಿರಿಯರು ದೇವಸ್ಥಾನದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು.

ಶಿಲ್ಪಿಗಳಾದ ವೆಂಕಣಸಾ ಬಸೂದೆ ಹಾಗೂ ಗುಡೂರಿನ ಕರವೀರಪ್ಪ ಯರಕದ ಅವರಿಗೆ ದೇವಿಯ ವಿಗ್ರಹ ನಿರ್ಮಾಣದ ಹೊಣೆ ವಹಿಸಲಾಗಿತ್ತು. ಕಲ್ಲಿನಲ್ಲಿ ಕಲಾತ್ಮಕವಾಗಿ ದೇವಾಲಯದ ಬಾಗಿಲು ನಿರ್ಮಿಸಿ, ಅದರಲ್ಲಿ 28 ದೇವಿಯ ನಾಮಾವಳಿಗಳನ್ನು ಕೆತ್ತನೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಶ್ರೀ ಅಂಬಾಭವಾನಿ ದೇವಿಗೆ ತ್ರಿಕಾಲ ಪೂಜೆ ನಿರಂತರವಾಗಿ ನಡೆಯುತ್ತಿದೆ.

ಕಲಾತ್ಮಕ ದೇವಾಲಯ: ಆರಂಭದಲ್ಲಿ ಗರ್ಭಗುಡಿ ಮಾತ್ರ ಹೊಂದಿದ್ದ ದೇವಸ್ಥಾನವು ಇಂದು ವಿಶಾಲ ಕಲ್ಲಿನ ನಿರ್ಮಾಣದ ಸುಂದರ ದೇವಾಲಯವಾಗಿ ರೂಪುಗೊಂಡಿದೆ. ಕಲ್ಲಿನ ಕಂಬಗಳು ಹಾಗೂ ಗೋಡೆಗಳಲ್ಲಿ ವಿಷ್ಣುವಿನ ದಶಾವತಾರ ಸೇರಿದಂತೆ ಹಲವು ದೇವತಾ ಮೂರ್ತಿಗಳನ್ನು ಕೆತ್ತಲಾಗಿದೆ. ಹನುಮಸಾಗರದ ಕುಶಲ ಶಿಲ್ಪಿ ಮಾರುತಿಸಾ ಕಾಟ್ವಾ ಈ ಶಿಲ್ಪಗಳನ್ನು ಕೆತ್ತಿದ್ದಾರೆ.

ಭಕ್ತರ ಆರಾಧ್ಯ ಕ್ಷೇತ್ರ: ಅಂಬಾಭವಾನಿ ದೇವಿಯನ್ನು ಭಕ್ತರು ತಮ್ಮ ಆರಾಧ್ಯದೇವತೆಯಾಗಿ ಪೂಜಿಸುತ್ತಿದ್ದು, ಪ್ರತಿ ಅಮಾವಾಸ್ಯೆಯಂದು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಕುಂಕುಮ ಪೂಜೆ, ಭಂಡಾರ ಪೂಜೆ, ನೈವೇದ್ಯ, ವಿಶೇಷ ಪೂಜೆ ಹಾಗೂ ಅನ್ನಪ್ರಸಾದ ಸೇವೆಯಲ್ಲಿ ಭಾಗವಹಿಸುತ್ತಾರೆ.

ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ, ಗೋಕಾಕ ಸೇರಿದಂತೆ ವಿವಿಧ ನಗರಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ಅಮಾವಾಸ್ಯೆಯ ಅನ್ನಪ್ರಸಾದ ಸೇವೆಗೆ ಈಗಾಗಲೇ ಎರಡು ವರ್ಷಗಳ ವರೆಗೆ ಮುಂಗಡವಾಗಿ ಬುಕ್ಕಿಂಗ್ ಆಗಿರುವುದು ದೇವಿಯ ಮೇಲಿನ ಭಕ್ತರ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ.

ಐತಿಹಾಸಿಕ ಕಾರ್ಯಕ್ರಮಗಳು: ದೇಗುಲದಲ್ಲಿ ಈ ಹಿಂದೆ ಹಲವು ಮಹತ್ವದ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. 2012ರಲ್ಲಿ ಲಕ್ಷದೀಪೋತ್ಸವ ಜರುಗಿದ್ದು, ಉಡುಪಿಯ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 2015ರಲ್ಲಿ ಬಂಗಾರದ ಕಿರೀಟ ಧಾರಣೆ ಕಾರ್ಯಕ್ರಮವನ್ನು ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿದ್ದರು. 2022ರಲ್ಲಿ ನಡೆದ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮದಲ್ಲಿ ಗೋಕಾಕದ ವಿಶ್ವಾಧಿರಾಜ ತೀರ್ಥ ಸ್ವಾಮೀಜಿ ಹಾಗೂ ಡಾ. ಪ್ರಮೋದಾಚಾರ ಪೂಜಾರ್ ಭಾಗವಹಿಸಿದ್ದರು ಎಂದು ಟ್ರಸ್ಟ್ ಅಧ್ಯಕ್ಷ ಭಗೀರಥಸಾ ಪಾಟೀಲ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.