ಕನ್ನಡದ ಕುಲಗುರು ಹಾಗೂ ಭಾವೈಕ್ಯತೆಯ ಹರಿಕಾರ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 8ನೇ ಪುಣ್ಯಸ್ಮರಣೆ ಹಾಗೂ ಮರಣವೇ ಮಹಾನವಮಿ ಆಚರಣೆ ಅಂಗವಾಗಿ ಅ. 22ರಂದು ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಡಾ. ಆನಂದ ಪಾಂಡುರಂಗಿ ಸೇರಿ ಐವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಗದಗಕನ್ನಡದ ಕುಲಗುರು ಹಾಗೂ ಭಾವೈಕ್ಯತೆಯ ಹರಿಕಾರ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 8ನೇ ಪುಣ್ಯಸ್ಮರಣೆ ಹಾಗೂ ಮರಣವೇ ಮಹಾನವಮಿ ಆಚರಣೆ ಅಂಗವಾಗಿ ಅ. 22ರಂದು ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಮಂಗಳವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ದಶಕಗಳಕಾಲ ಸಮಾಜ, ಪರಿಸರ, ಸಾಹಿತ್ಯ ಹಾಗೂ ಕೋಮು ಸೌಹಾರ್ದತೆಗೆ ಅವಿರತ ಶ್ರಮಿಸಿದ ಶ್ರೀಗಳ ಸ್ಮರಣಾರ್ಥವಾಗಿ ವಿದ್ಯಾಪೀಠದ ನೌಕರರು ಸ್ಥಾಪಿಸಿರುವ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ತಲಾ ₹ಒಂದು ಲಕ್ಷ ರುಪಾಯಿ ಗೌರವಧನದೊಂದಿಗೆ ಕಲಬುರಗಿಯ ಮಾಜಿ ಕಾರ್ಮಿಕ ಸಚಿವ ಡಾ. ಎಸ್.ಕೆ. ಕಾಂತಾ, ಧಾರವಾಡದ ಖ್ಯಾತ ಮನೋವೈದ್ಯ ದಿ. ಡಾ. ಆನಂದ ಪಾಂಡುರಂಗಿ (ಮರಣೋತ್ತರ), ಬೆಳಗಾವಿ ಜಿಲ್ಲೆ ಹಾರೂಗೇರಿಯ ಶರಣ ವಿಚಾರವಾಹಿನಿ ಅಧ್ಯಕ್ಷ ಐ.ಆರ್. ಮಠಪತಿ, ಬೆಂಗಳೂರಿನ ಬಸವ ಮೀಡಿಯಾ ಹಾಗೂ ಬೀದರ್ನ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವದ ಅಂಗವಾಗಿ ಪಾಲಾ-ಬದಾಮಿ ರಸ್ತೆಯಲ್ಲಿ ನಿರ್ಮಿಸಲಾದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣ ಸೌಧ ಲೋಕಾರ್ಪಣೆಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ನೌಕರರ ಪತ್ತಿನ ಸಹಕಾರಿ ಸಂಘದ ವತಿಯಿಂದ ಶ್ರೀಗಳ 10 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ನಗರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ವಿವರಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಮಾತನಾಡಿ, ಅ. 22ರ ಸಮಾರಂಭದ ಸಾನ್ನಿಧ್ಯವನ್ನು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ನಿವೃತ್ತ ಗೃಹ ಕಾರ್ಯದರ್ಶಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಅವರು ನೂತನ ಸುವರ್ಣ ಸೌಧ ಕಟ್ಟಡ ಉದ್ಘಾಟಿಸಿ, ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ತರಗಿ ಇಳಕಲ್ನ ವಿಜಯ ಮಹಾಂತೇಶ್ವರ ಸ್ವಾಮೀಜಿ ಸೇರಿ ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಡಾ. ಎನ್.ಜಿ. ಮಹಾದೇವಪ್ಪ ಅವರ ವಚನಗಳಲ್ಲಿ ಅನುಭಾವ, ಡಾ. ಪ್ರದೀಪಕುಮಾರ ಹೆಬ್ರಿ ಅವರ ಬೆಳಗು ಮಹಾಬೆಳಗು ಮತ್ತು ಶೇಕ್ಸ್ಪಿಯರ್ ಮತ್ತು ಕಂದಗಲ್ಲ ಹನುಮಂತರಾಯ ತುಲನಾತ್ಮಕ ಅಧ್ಯಯನ ಹಾಗೂ ಪ್ರೊ. ಆರ್.ಎಸ್. ಲೆಕ್ಕದ ಅವರ ಶಾಂತಗಿರಿ ಅಯ್ಯಪ್ಪಯ್ಯ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಕೆ.ಎಸ್. ಚಟ್ಟಿ, ಶೇಖರಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ, ಅಮರೇಶ ಅಂಗಡಿ ಮುಂತಾದವರಿದ್ದರು.