ಸಾರಾಂಶ
ಹಿಂದಿನಂತೆ ಈ ಅಧಿಕಾರವನ್ನು ಮತ್ತೇ ಗ್ರಾ.ಪಂ.ಗಳಿಗೆ ನೀಡಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಎಂದು ಕೋಟ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಈ ಹಿಂದೆ ಇದ್ದಂತೆ ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ನಿವೇಶನಗಳ 9 ಮತ್ತು 11 ರ ವಿತರಣೆ ಮತ್ತು ಏಕ ನಿವೇಶನ ನಕ್ಷೆಯ ಅನುಮೋದನೆ ನೀಡುವಂತೆ ಆದೇಶ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ಗ್ರಾಮ ಪಂಚಾಯಿತಿಗಳು ಈ ಹಿಂದೆ ನೀಡುತ್ತಿರುವ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು ಇ-ಸ್ವತ್ತಿನ 9 ಮತ್ತು 11 ವಿತರಣೆಯನ್ನು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ, ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯಬೇಕಾಗಿದ್ದು, ಈ ಹೊಸ ಸುತ್ತೋಲೆಯಿಂದ ಜನಸಾಮಾನ್ಯರಿಗೆ ತುಂಬಾ ಸಮಸ್ಯೆಗಳಾಗುತ್ತಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ತುಂಡು ಭೂಮಿ ಗೊಂದಲದಿಂದ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಹಿಂದೆ ನಿವೇಶನಗಳ ವಿನ್ಯಾಸ ಅನುಮೋದನೆಗೆ ಜಿ.ಪಂ. ಇಂಜಿನಿಯರ್ ವಿಭಾಗದಿಂದ ತಾಂತ್ರಿಕ ಶಿಫಾರಸ್ಸುಗಳಿಗೆ ಅವಕಾಶಗಳಿದ್ದು, ಈಗ ಮಾಡಿರುವ ಬದಲಾವಣೆಯಿಂದ ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳ ಕೊರತೆಯಿರುವ ಪ್ರಾಧಿಕಾರವನ್ನು ಆಶ್ರಯಿಸಬೇಕಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳ ಹಕ್ಕನ್ನು ಕಸಿದುಕೊಂಡಂತಾಗಿದೆ. ಒಟ್ಟಾರೆ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು 9 ಮತ್ತು 11 ರ ವಿತರಣೆಯ ವ್ಯವಸ್ಥೆಯನ್ನು ಪಂಚಾಯತ್ ರಾಜ್ ವ್ಯವಸ್ಥೆಯಿಂದ ನಗರ ಪ್ರಾಧಿಕಾರಕ್ಕೆ ನೀಡಿರುವುದರಿಂದ ಬಡವರು ಸೇರಿದಂತೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ.ಆದ್ದರಿಂದ ಹಿಂದಿನಂತೆ ಈ ಅಧಿಕಾರವನ್ನು ಮತ್ತೇ ಗ್ರಾ.ಪಂ.ಗಳಿಗೆ ನೀಡಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಎಂದು ಕೋಟ ಪತ್ರದಲ್ಲಿ ಆಗ್ರಹಿಸಿದ್ದಾರೆ.