೯/೧೧ ನಕ್ಷೆ ವಿತರಣೆ ಅಧಿಕಾರವನ್ನು ಗ್ರಾ.ಪಂ. ಮರಳಿಸಲು ಸಂಸದ ಕೋಟ ಸಿಎಂಗೆ ಮನವಿ

| Published : May 18 2025, 01:40 AM IST

೯/೧೧ ನಕ್ಷೆ ವಿತರಣೆ ಅಧಿಕಾರವನ್ನು ಗ್ರಾ.ಪಂ. ಮರಳಿಸಲು ಸಂಸದ ಕೋಟ ಸಿಎಂಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ಜನರಿಗೆ ಏಕವಿನ್ಯಾಸದ ನಕ್ಷೆಗಳನ್ನು ಪುನಃ ಹಿಂದಿನಂತೆ ಗ್ರಾಪಂಗಳ ಮೂಲಕವೇ ನೀಡುವ ವ್ಯವಸ್ಥೆ ಮಾಡುವಂತೆ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಗ್ರಾಮೀಣ ಭಾಗದ ಜನರಿಗೆ ಏಕವಿನ್ಯಾಸದ ನಕ್ಷೆಗಳನ್ನು ಪುನಃ ಹಿಂದಿನಂತೆ ಗ್ರಾಪಂಗಳ ಮೂಲಕವೇ ನೀಡುವ ವ್ಯವಸ್ಥೆ ಮಾಡುವಂತೆ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.ಸಂಸದರು ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಈ ಮನವಿ ಸಲ್ಲಿಸಿದರು.ರಾಜ್ಯ ನಗರಾಭಿವೃದ್ಧಿ ಇಲಾಖೆಯು ಏಕವಿನ್ಯಾಸ ನಕ್ಷೆ (೯/೧೧) ವಿತರಣೆ ಮಾಡುವ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸಿ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದೆ. ಇದರಿಂದಾಗಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ, ರಾಜ್ಯದ ಕೆಲವೆಡೆ ಜನಸಾಮಾನ್ಯರಿಗೆ ಮನೆ ನಿರ್ಮಿಸಲು ಅಗತ್ಯವಾದ ಏಕವಿನ್ಯಾಸದ ನಕ್ಷೆ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆರಡು ವಾರದಲ್ಲಿ ಪಂಚಾಯಿತಿಯಲ್ಲಿ ಸಿಗುತ್ತಿದ್ದ ೯/೧೧ ನಕ್ಷೆಗಳು ಈಗ ಪ್ರಾಧಿಕಾರದಿಂದ ಆರೇಳು ತಿಂಗಳಾದರೂ ಸಿಗುತ್ತಿಲ್ಲ. ಅಲ್ಲದೆ, ಪ್ರಾಧಿಕಾರದ ನಡುವೆ ಮಧ್ಯವರ್ತಿಗಳ ಕಾಟ ಅತಿಯಾಗುತ್ತಿದೆ. ಉಡುಪಿ ಜಿಲ್ಲೆಯೊಂದರಲ್ಲೇ ೧೦,೦೦೦ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಾಗಿವೆ. ಆದ್ದರಿಂದ ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಿ ಮತ್ತೆ ಪಂಚಾಯಿತಿಗಳ ಮೂಲಕ ಏಕವಿನ್ಯಾಸ ನಕ್ಷೆ ನೀಡುವಂತೆ ಮಾಡಬೇಕು ಎಂದು ಕೋಟ ಆಗ್ರಹಿಸಿದರು.ಅಲ್ಲದೇ ಪಂಚಾಯಿತಿ ಈ ಅಧಿಕಾರ ಮೊಟಕು ಮಾಡುವುರಿಂದ ಸಂವಿಧಾನದ ೭೩ನೇ ಕಲಂ ತಿದ್ದುಪಡಿಯ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಕೋಟ ಸಿಎಂ ಗಮನಕ್ಕೆ ತಂದರು.ನಗರಾಭಿವೃದ್ಧಿ ಇಲಾಖೆ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದತ್ತ ಬೆಟ್ಟು ತೋರಿಸುತ್ತಿದ್ದು, ವಾಸ್ತವಿಕವಾಗಿ ನ್ಯಾಯಾಲಯ ನಿಯಮ ಉಲ್ಲಂಘನೆಯ ಬಗ್ಗೆ ಸೂಕ್ತ ರೂಪುರೇಷೆ ತಯಾರಿಸಲು ನಿರ್ದೇಶಿಸಿದ್ದು, ಯಾವುದೇ ಕಾರಣಕ್ಕೂ ಪಂಚಾಯಿತಿ ಆಡಳಿತದ ಹಕ್ಕು ಮೊಟಕುಗೊಳಿಸಲು ಸೂಚಿಸಿಲ್ಲ ಎಂದು ಸಂಸದ ಕೋಟ ಸ್ಪಷ್ಪಪಡಿಸಿದರು.ಈ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಸಚಿವ ಸಂಪುಟದ ಅನುಮೋದನೆ ಪಡೆದು ಈ ಹಿಂದಿನ ಪದ್ಧತಿಯಂತೆ ಒಂದು ಎಕ್ರೆ ಪ್ರದೇಶದ ಒಳಗಿನ ವಿಸ್ತೀರ್ಣದ ಪ್ರದೇಶದ ಏಕವಿನ್ಯಾಸದ ನಕ್ಷೆ ನೀಡುವ ಅಧಿಕಾರವನ್ನು ಪಂಚಾಯತ್ ರಾಜ್ ಇಲಾಖೆಗೆ ಮರಳಿಸಬೇಕು ಎಂದು ಕೋಟ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.ಸಂಸದದ ಬೇಡಿಕೆ, ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ಎಲ್ಲ ಮಾಹಿತಿಯೊಂದಿಗೆ ವಿವರವಾದ ಕಡತ ಮಂಡಿಸುವಂತೆ ಆಪ್ತ ಕಾರ್ಯದರ್ಶಿ ಅತಿಕ್‌ ಅವರಿಗೆ ನಿರ್ದೇಶನ ನೀಡಿದ್ದಾರೆಂದು ಸಂಸದ ಕೋಟ ತಿಳಿಸಿದ್ದಾರೆ.