ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಪದವೀಧರರು ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು. ನವೆಂಬರ್ 1ರ ಅರ್ಹತಾ ದಿನಾಂಕದನ್ವಯ ಈ ವರೆಗೆ ಒಟ್ಟು 90,460 ಮತದಾರರು ನೋಂದಾಯಿಸಿದ್ದಾರೆ.

ಧಾರವಾಡ:

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಪದವೀಧರರು ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು. ನವೆಂಬರ್ 1ರ ಅರ್ಹತಾ ದಿನಾಂಕದನ್ವಯ ಈ ವರೆಗೆ ಒಟ್ಟು 90,460 ಮತದಾರರು ನೋಂದಾಯಿಸಿದ್ದಾರೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಉಮೇದುವಾರರು 30 ವರ್ಷಗಳಿಗೆ ಕಡಿಮೆ ಇರಬಾರದು. ಯಾವುದಾದರೂ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ಪಟ್ಟಿಯಲ್ಲಿರುವ ನೋಂದಾಯಿತರಾದ ಪದವೀಧರರು ಮಾತ್ರ ಮತದಾರರು. ಪ್ರಸ್ತುತ ಚುನಾವಣೆಗೆ ಡಿ-ನೋವೋ ಪದ್ಧತಿಯನ್ವಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಒಟ್ಟು 137 ಮತಗಟ್ಟೆ ಸ್ಥಾಪಿಸಲಾಗಿದೆ. ಇದರಲ್ಲಿ 128 ಮೂಲ ಹಾಗೂ 9 ಹೆಚ್ಚುವರಿ ಮತಗಟ್ಟೆ ಸೇರಿವೆ ಎಂದರು.

ಭಾರತ ಚುನಾವಣಾ ಆಯೋಗವು ಸೆ. 22ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಅಂದಿನಿಂದಲೇ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಹೇಳಿದ್ದಾರೆ. ಸ್ಪರ್ಧಿಸಲು ಬಯಸುವ ಉಮೇದುವಾರರು ನಾಮಪತ್ರ ನಮೂನೆ-2ಇ, ಪರಿಷ್ಕೃತ ಪ್ರಮಾಣ ಪತ್ರ (ಅಫಿಡವಿಟ್) ನಮೂನೆ-26 ಸೇರಿದಂತೆ ಇತರ ನಮೂನೆಗಳನ್ನು ಸೆ. 29ರಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ವೇಳೆಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಸೆ. 29ರಿಂದ ಅ. 6ರ ವರೆಗೆ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು. ಸಾಮಾನ್ಯ ವರ್ಗದ ಉಮೇದುವಾರರು ₹ 10 ಸಾವಿರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಮೇದುವಾರರು ₹ 5 ಸಾವಿರ ಠೇವಣಿ ನಾಮಪತ್ರ ಸಲ್ಲಿಕೆ ಕಾಲಕ್ಕೆ ಠೇವಣಿ ಇಡಬೇಕು ಎಂದು ಹೇಳಿದರು.

ನಾಮಪತ್ರದೊಂದಿಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿನ ಎಲ್ಲ ಅಂಕಣಗಳನ್ನು ಕಡ್ಡಾಯವಾಗಿ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ಯಾವುದೇ ಅಂಕಣವನ್ನು ಖಾಲಿ ಬಿಟ್ಟಲ್ಲಿ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತವಾಗುವ ಸಾಧ್ಯತೆ ಇದೆ. ಪ್ರಮಾಣ ಪತ್ರ, ನಮೂನೆ ‘ಎಎ’ ಹಾಗೂ ‘ಬಿಬಿ’ಗಳನ್ನು ನಾಮಪತ್ರದೊಂದಿಗೆ ಸಲ್ಲಿಸದೇ ಇದ್ದಲ್ಲಿ, ಅವುಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಅ.6ರಂದು ಮಧ್ಯಾಹ್ನ 3ರೊಳಗೆ ಸಲ್ಲಿಸಬೇಕು ಎಂದು ಕೆ.ಎಂ. ಜಾನಕಿ ತಿಳಿಸಿದ್ದಾರೆ.