ಸಾರಾಂಶ
ಬೆಂಗಳೂರಿನ ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಿದ ಬಿಬಿಎಂಪಿಯು 90 ಕೋಟಿಯನ್ನು ಮೀಸಲಿರಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿರಲು 110 ಹಳ್ಳಿಗಳು ಸೇರಿದಂತೆ ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾದ ಪ್ರದೇಶಗಳಲ್ಲಿ ನೀರು ಪೂರೈಸಲು ₹90 ಕೋಟಿ ವ್ಯಯಿಸಲು ಉದ್ದೇಶಿಸಲಾಗಿದೆ.ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 110 ಹಳ್ಳಿ ಸೇರಿದಂತೆ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ಬಿಬಿಎಂಪಿಯಿಂದಲೇ ಕುಡಿಯುವ ನೀರು ಪೂರೈಸಲಾಗುವುದು. ಉಳಿದ ಪ್ರದೇಶಗಳಲ್ಲಿ ಜಲಮಂಡಳಿಯಿಂದ ನೀರು ಪೂರೈಕೆ ಮಾಡಲಾಗುವುದು. ಅದಕ್ಕಾಗಿ ನಗರ ಪ್ರದೇಶದಲ್ಲಿನ ಎಲ್ಲ ಕೊಳವೆಬಾವಿಗಳನ್ನು ಈಗಾಗಲೇ ಜಲಮಂಡಳಿಗೆ ವಹಿಸಲಾಗಿದೆ. ಇದಕ್ಕಾಗಿ ಜಲಮಂಡಳಿಗಾಗಿ ಬಿಬಿಎಂಪಿಯಿಂದ ₹8 ಕೋಟಿ ನೀಡಲಾಗುತ್ತಿದೆ ಎಂದರು.
ನೀರು ಪೂರೈಸಲು ₹90 ಕೋಟಿ ಮೀಸಲಾಗಿದೆ. ಈ ಪೈಕಿ ₹50 ಕೋಟಿಗಳನ್ನು ಕೊಳವೆಬಾವಿ ದುರಸ್ತಿ ಸೇರಿದಂತೆ ಹೊಸ ಕೊಳವೆ ಬಾವಿ ಕೊರೆಸಲು ಬಳಸಲಾಗುವುದು. ಉಳಿದ ₹40 ಕೋಟಿಗಳನ್ನು 15ನೇ ಹಣಕಾಸು ಆಯೋಗದಿಂದ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.