ವಿಧಾನ ಪರಿಷತ್ ಸದಸ್ಯರಾಗಿ ಶಿವಕುಮಾರ್ ಹೆಸರು ಘೋಷಣೆಯಾದಾಗ ಕೆಲವು ಪತ್ರಕರ್ತರಿಗೆ ಸಂತೋಷವಾಗಿದೆ. ಉಳಿದ ಅನೇಕರಿಗೆ ಬೇಸರವಾಗಿದೆ. ಏಕೆಂದರೆ ಭಾರತದ ಪತ್ರಿಕೋದ್ಯಮದಲ್ಲಿ ಶೇ.90 ರಷ್ಟು ಮೇಲ್ವರ್ಗದವರ ಹಿಡಿತದಲ್ಲಿದೆ. ಉಳಿದದ್ದರಲ್ಲಿ ಇತರೆ ಜಾತಿಗಳಿವ. ಆದ್ದರಿಂದ ಕೆಲವರಿಗೆ ಬೇಸರವಾಗಿರುವುದು ಸಹಜ.
ಕನ್ನಡಪ್ರಭ ವಾರ್ತೆ ಮೈಸೂರು
ಅರ್ಹರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಮೂಲಕ ಸರ್ಕಾರ ಉತ್ತಮ ಸಂದೇಶ ನೀಡಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟವು ಮಂಗಳವಾರ ಏರ್ಪಡಿಸಿದ್ದ ನೂತನ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮುಖ್ಯಭಾಷಣ ಮಾಡಿದರು.
ವಿಧಾನ ಪರಿಷತ್ ಸದಸ್ಯರಾಗಿ ಶಿವಕುಮಾರ್ ಹೆಸರು ಘೋಷಣೆಯಾದಾಗ ಕೆಲವು ಪತ್ರಕರ್ತರಿಗೆ ಸಂತೋಷವಾಗಿದೆ. ಉಳಿದ ಅನೇಕರಿಗೆ ಬೇಸರವಾಗಿದೆ. ಏಕೆಂದರೆ ಭಾರತದ ಪತ್ರಿಕೋದ್ಯಮದಲ್ಲಿ ಶೇ.90 ರಷ್ಟು ಮೇಲ್ವರ್ಗದವರ ಹಿಡಿತದಲ್ಲಿದೆ. ಉಳಿದದ್ದರಲ್ಲಿ ಇತರೆ ಜಾತಿಗಳಿವ. ಆದ್ದರಿಂದ ಕೆಲವರಿಗೆ ಬೇಸರವಾಗಿರುವುದು ಸಹಜ ಎಂದರು.ಅಹಿಂದ ಎಂಬ ಪದ ಕೇವಲ ಸ್ಲೋಗನ್ ಅಲ್ಲ. ಅಂಬೇಡ್ಕರ್ ಅವರ ಕನಸು ಕೂಡ. ಶಿವಕುಮಾರ್ ಅವರೊಬ್ಬ ಸಜ್ಜನ ಮನುಷ್ಯ. ಬೇಗನೆ ಸ್ನೇಹ ಬಯಸುತ್ತಾರೆ. ಅವರು ಎಂದಿಗೂ ತಮ್ಮ ಹಳ್ಳಿಯ ಬೇರುಗಳನ್ನು ಮರೆತಿಲ್ಲ. ಮೈಸೂರಿನಲ್ಲಿ ಸೈಕಲ್‌ನಲ್ಲಿ ತಿರುಗಾಡಿದ ದಿನಗಳನ್ನೂ ಅವರು ಮರೆತಿಲ್ಲ ಎಂದರು.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಶಿವಕುಮಾರ್ ಅವರು ದೀರ್ಘ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪತ್ರಿಕೆಯಲ್ಲಿ ಬರೆದು ಸಮಾಜದ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿರುವುದು ಸಂತಸದ ವಿಚಾರ. ದಲಿತರ ಪರವಾಗಿ ಮಾತನಾಡಲು ಒಳ್ಳೆಯ ವೇದಿಕೆ ಸಿಕ್ಕಿದೆ. ಈಗಾಗಲೇ ನಡೆದ ಬೆಳಗಾವಿ ಆದಿವೇಶನದಲ್ಲಿ ಜನ ಮಾನಸದ ಸಮಸ್ಯೆಗಳನ್ನು ಸದನದ ಮುಂದೆ ಇಟ್ಟಿದ್ದಾರೆ ಎಂದರು.ಶಾಸಕ ತನ್ವೀರ್ ಸೇಠ್ ಮಾತನಾಡಿ, ಯಾರು ಏನು ಬೇಕಾದರು ಆಗಬಹುದು ಎಂಬ ಸಂವಿಧಾನದ ಆಶಯಕ್ಕೆ ಕೆ. ಶಿವಕುಮಾರ್ ಸಾಕ್ಷಿಯಾಗಿದ್ದಾರೆ. ಪ್ರಶ್ನೆ ಕೇಳುವ ಸ್ಥಾನದಿಂದ ಉತ್ತರ ಕೊಡುವ ಸ್ಥಾನಕ್ಕೆ ಬಂದಿದ್ದಾರೆ. ಪತ್ರಕರ್ತರಾಗಿಯೇ ಹಿರಿಯರ ಆಶೀರ್ವಾದಗಳನ್ನು ಪಡೆದರು. ಬಸವಲಿಂಗಪ್ಪ ಸಲಹೆಯ ಮೇರೆಗೆ ಪತ್ರಕರ್ತರಾದರು. ಅವರ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ. ಇವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿಕೊಂಡಿದ್ದು, ನಮ್ಮ ಸೌಭಾಗ್ಯ ಎಂದರು.
ಅತ್ಯಂತ ಸ್ನೇಹಿಜೀವಿ. ಸ್ನೇಹಕ್ಕೆ ಬೆಲೆ ಕಟ್ಟುತ್ತಾರೆ. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದರು. ಸಲಹೆಗಳನ್ನು ಕೊಡುತ್ತಿದ್ದರು. ಸಮಾಜವನ್ನು ಕಟ್ಟುವುದು ಅವರ ಆಸೆಯಾಗಿತ್ತು. ಮೇಲ್ಮನೆ ಸದಸ್ಯರಾಗಿ ಅವರ ಜವಾಬ್ದಾರಿ ನಿರ್ವಹಿಸುವುದರಲ್ಲಿ ಅನುಮಾನವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಮತ್ತಷ್ಟು ಉತ್ತಮ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದರು.ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾನು ಕೂಡ ಪತ್ರಿಕೋದ್ಯಮ ಓದಿದ ವಿದ್ಯಾರ್ಥಿ. ಒಂದು ವೋಟಿನ ಮಹತ್ವ ಏನು ಎಂಬುದು ಇಡೀ ದೇಶಕ್ಕೆ ನನ್ನಿಂದ ತಿಳಿಯಿತು. ಅನೇಕ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಹಿರಿಯರು ಸಲಹೆ ನೀಡಿದ್ದಾರೆ. ನನ್ನ ರಾಜಕೀಯ ಜೀವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಜನ್ಮ ನೀಡಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿನಂದನಾ ಸಮಿತಿ ಅಧ್ಯಕ್ಷ ಹರಿಹರ ಆನಂದ ಸ್ವಾಮಿ, ಒಳ ಮೀಸಲಾತಿ ಹಂಚಿಕೆಯಲ್ಲಿ ದಲಿತರಲ್ಲಿ ವೈಮನಸ್ಸು ಉಂಟಾಗಿದೆ. ಹೀಗಾಗಿ ಯಾರಿಗೂ ಅನ್ಯಾಯವಾಗದಂತೆ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ದಲಿತರು ಅಧಿಕಾರ ಕೊಡಿ ಎಂದು ಕೇಳುತ್ತಿರುವುದನ್ನು ತಪ್ಪಾಗಿ ತಿಳಿದುಕೊಳ್ಳಬಾರದು. ವಿಶಾಲವಾದ ಮನಸ್ಸಿನಿಂದ ತೆಗೆದುಕೊಂಡು ಸಾಧ್ಯತೆಗಳು ಇದ್ದರೆ ದಲಿತ ಸಮುದಾಯಕ್ಕೆ ಅವಕಾಶ ಕೊಡಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ಮೊದಲಾದವರು ಇದ್ದರು.