ಗೃಹಲಕ್ಷ್ಮೀ ಯೋಜನೆಯಿಂದ ಶೇ.90ರಷ್ಟು ಮಹಿಳೆಯರಿಗೆ ಅನುಕೂಲ: ಶಾಸಕ ವಿಶ್ವಾಸ ವೈದ್ಯ

| Published : Dec 08 2024, 01:16 AM IST

ಗೃಹಲಕ್ಷ್ಮೀ ಯೋಜನೆಯಿಂದ ಶೇ.90ರಷ್ಟು ಮಹಿಳೆಯರಿಗೆ ಅನುಕೂಲ: ಶಾಸಕ ವಿಶ್ವಾಸ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸವದತ್ತಿ ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಿಂದ ಶೇ.90ರಷ್ಟು ಮಹಿಳೆಯರಿಗೆ ಅನುಕೂಲವಾಗಿದ್ದು, ಬಾಕಿ ಉಳಿದಂತ ಶೇ.10ರಷ್ಟು ಮಹಿಳೆಯರಿಗೂ ಸಹ ಯೋಜನೆಯ ಲಾಭ ತಲುಪುವಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಿಂದ ಶೇ.90ರಷ್ಟು ಮಹಿಳೆಯರಿಗೆ ಅನುಕೂಲವಾಗಿದ್ದು, ಬಾಕಿ ಉಳಿದಂತ ಶೇ.10ರಷ್ಟು ಮಹಿಳೆಯರಿಗೂ ಸಹ ಯೋಜನೆಯ ಲಾಭ ತಲುಪುವಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ತಾಲೂಕುಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮುನ್ನಡೆಯುತ್ತಿರುವ 5 ಗ್ಯಾರಂಟಿ ಯೋಜನೆಗಳು ಬಡಜನರಿಗೆ ಸಾಕಷ್ಟು ಉಪಯೋಜನಕಾರಿಯಾಗಿದ್ದು, ಜಾರಿಯಾದ 16 ತಿಂಗಳಲ್ಲಿ 13 ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಅರ್ಹ ಮಹಿಳಾ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆ ಮಹಿಳಾ ಪ್ರಯಾಣಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಬಸ್‌ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸರಿಯಾಗಿ ಸ್ಪಂದಿಸಬೇಕೆಂದ ಅವರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಸಿಬ್ಬಂದಿ ಸಹಕರಿಸುವುದರ ಜೊತೆಗೆ ದೂರದ ಊರಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅನಕೂಲ ಕಲ್ಪಿಸಬೇಕೆಂದರು. ಯರಗಟ್ಟಿಯ ಸಿ.ಎಂ. ಮಾಮನಿ ಪ್ರಥಮ ದರ್ಜೆ ಕಾಲೇಜನ ವಿದ್ಯಾರ್ಥಿಗಳು ಕೆಲವು ಬಸ್‌ಗಳ ನಿಲುಗಡೆ ಇಲ್ಲದ್ದರಿಂದ 4 ಕಿಮೀವರೆಗೆ ನಡೆದುಕೊಂಡು ಹೋಗುವಂತಾಗಿದ್ದು, ಅನುಕೂಲವಾಗುವಂತೆ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಗೃಹಲಕ್ಷ್ಮೀ ಯೋಜನೆ ಕುರಿತು ಸಿಡಿಪಿಒ ಸುನಿತಾ ಪಾಟೀಲ ಹಾಗೂ ಗೃಹಜ್ಯೋತಿ ಯೋಜನೆ ಕುರಿತು ಹೆಸ್ಕಾಂ ಎಇಇ ಮಹೇಂದ್ರ ವಿಶಾಪುರಕರ, ಅನ್ಯಭಾಗ್ಯ ಯೋಜನೆ ಮತ್ತು ಪಡಿತರ ಚೀಟಿಯ ವಿಷಯ ಕುರಿತು ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೆ ಮಾಹಿತಿ ನೀಡಿದರು.

ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಕುಮಾರ ರಾಥೋಡ ಮಾತನಾಡಿದರು.

ತಾಪಂ ಕಾರ್ಯನಿರ್ವಣಾಧಿಕಾರಿ ಆನಂದ ಬಡಕುಂದ್ರಿ, ಮಲ್ಲು ಜಕಾತಿ, ಬಸವರಾಜ ಪ್ರಭುನವರ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಶಿವಾನಂದ ಪಟ್ಟಣಶೆಟ್ಟಿ, ಮಂಜುನಾಥ ಪಾಚಂಗಿ, ಸುನೀಲ ತಾರೀಹಾಳ ಹಾಗೂ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಇದ್ದರು. ಮಲ್ಲಯ್ಯ ಕಂಬಿ ನಿರೂಪಿಸಿ ವಂದಿಸಿದರು.