ರೋಣ ಪಿಎಲ್ಡಿ ಬ್ಯಾಂಕ್‌ ಚುನಾವಣೆಗೆ ಶೇ.90ರಷ್ಟು ಮತದಾನ

| Published : Jan 06 2025, 01:03 AM IST / Updated: Jan 06 2025, 01:04 AM IST

ಸಾರಾಂಶ

ಈಗಾಗಲೇ ಒಟ್ಟು 14 ಮತಕ್ಷೇತ್ರಗಳಲ್ಲಿ ಸಾಲಗಾರ ಕ್ಷೇತ್ರಗಳಾದ ರೋಣ ಅಬ್ಬಿಗೇರಿ, ನರೇಗಲ್ಲ, ಹುಲ್ಲೂರ, ರಾಜೂರ, ಬೆಳವಣಕಿ ಹಾಗೂ ರೋಣ/ಗಜೇಂದ್ರಗಡ ಬಿನ್ ಸಾಲಗಾರ ಕ್ಷೇತ್ರಕ್ಕೆ ಅವಿರೋಧ ಆಯ್ಕೆ

ರೋಣ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್ಡಿ) ಸದಸ್ಯರ ಆಯ್ಕೆಗೆ ಚುನಾವಣೆ ಭಾನುವಾರ ಪಟ್ಟಣದ ಪುರಸಭೆ ಆವರಣದಲ್ಲಿ ಜರುಗಿದ್ದು, ಶೆ. 90 ರಷ್ಟು ಮತದಾನವಾಗಿದೆ. ಸಂಜೆ ಮತ ಏಣಿಕೆ ಜರುಗಿದ್ದು, ಫಲಿತಾಂಶ ಘೋಷಣೆಯೊಂದೆ ಬಾಕಿ ಉಳಿದುಕೊಂಡಿದೆ.ಮತಗಟ್ಟೆ ಆವರಣದಲ್ಲಿ ನಡೆದ ವಾಮಾಚಾರ ಘಟನೆ ಕೊಂಚ ಆತಂಕ ಸೃಷ್ಟಿಸಿದ್ದನ್ನು ಹೊರತುಪಡಿಸಿ ಎಲ್ಲಡೆ ಮತದಾನವು ಶಾಂತಯುತವಾಗಿ ಜರುಗಿತು.

ಒಟ್ಟು 14 ಕ್ಷೇತ್ರಗಳ ಪೈಕಿ 7 ಕ್ಷೇತ್ರಕ್ಕೆ ಮಾತ್ರ ಚುನಾವಣೆ ಜರುಗಿದ್ದು, ಒಟ್ಟು 983 ಮತದಾರರಲ್ಲಿ 886 ಮತದಾರರು ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಪ್ರಶಾಂತ ಮುಧೋಳ‌ ಕಾರ್ಯ ನಿರ್ವಹಿಸಿದರು.

ಪಿಎಲ್ಡಿ ಬ್ಯಾಂಕ್‌ನ ಒಟ್ಟು 14 ಸದಸ್ಯರ ಆಯ್ಕೆ ನಡೆಯಬೇಕಿದ್ದು, ಈಗಾಗಲೇ ಒಟ್ಟು 14 ಮತಕ್ಷೇತ್ರಗಳಲ್ಲಿ ಸಾಲಗಾರ ಕ್ಷೇತ್ರಗಳಾದ ರೋಣ ಅಬ್ಬಿಗೇರಿ, ನರೇಗಲ್ಲ, ಹುಲ್ಲೂರ, ರಾಜೂರ, ಬೆಳವಣಕಿ ಹಾಗೂ ರೋಣ/ಗಜೇಂದ್ರಗಡ ಬಿನ್ ಸಾಲಗಾರ ಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದಿದೆ.

ಇನ್ನು ಬಾಕಿ ಉಳಿದ ಸಾಲಗಾರ ಕ್ಷೇತ್ರಗಳಾದ ಹೊಳೆಆಲೂರ, ನೀಡಗುಂದಿ, ಹಿರೇಹಾಳ, ಗಜೇಂದ್ರಗಡ, ಸೂಡಿ, ಮುಶಿಗೇರಿ ಮತ್ತು ಸವಡಿ ಕ್ಷೇತ್ರಗಳ 7 ಸದಸ್ಯರ ಆಯ್ಕೆಗಾಗಿ ಭಾನುವಾರ ಚುನಾವಣೆ ಜರುಗಿತು. ಶಾಂತಯುತವಾಗಿ ಚುನಾವಣೆ ಜರುಗಿಸಲು ಸಿಪಿಐ ಎಸ್.ಎಸ್. ಬೀಳಗಿ, ಪಿ.ಎಸ್.ಐ ಪ್ರಕಾಶ ಬಣಕಾರ ನೇತೃತ್ವದಲ್ಲಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಫಲಿತಾಂಶ ಘೋಷಣೆ ಬಾಕಿ: ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ಪ್ರಕ್ರಿಯೆ ನಡೆದ ಬಳಿಕ ಮತ ಏಣಿಕೆ ಪ್ರಾರಂಭಗೊಂಡು ಫಲಿತಾಂಶ ಘೋಷಣೆಯಾಗಬೇಕಿತ್ತು. ಆದರೆ 983 ಮತದಾರರಲ್ಲಿ 266 ಮತದಾರರು ಅನರ್ಹರಾಗಿದ್ದರಿಂದ ಅವರು ಮತದಾನದ ಹಕ್ಕು ಪಡೆಯಲು ಕೋರ್ಟ ಮೋರೆ ಹೋಗಿದ್ದು, ಈ ಮೊದಲೆ ಚುನಾವಣೆ ದಿನಾಂಕ ನಿಗದಿಯಾಗಿದ್ದರಿಂದ ಅನರ್ಹರ ಮತದಾರರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮತಗಟ್ಟೆಯಲ್ಲಿ ಅರ್ಹ ಹಾಗೂ ಅನರ್ಹ ಮತದಾರರಿಗೆ ಪ್ರತ್ಯೇಕ ಮತ ಪೆಟ್ಟಿಗೆ ನಿರ್ಮಾಣ ಮಾಡಲಾಗಿತ್ತು. ಕೋರ್ಟ್‌ನಲ್ಲಿ ವಿಚಾರಣೆ ತೀರ್ಪು ಕಾಯ್ದಿರಿಸಿದ್ದರಿಂದ ಅರ್ಹ ಮತದಾರರ ಮತಗಳ ಎಣಿಕೆ ಮಾತ್ರ ಜರುಗಿದ್ದು, ಅನರ್ಹರ ಮತ ಎಣಿಕೆ ಬಾಕಿ ಉಳಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಫಲಿತಾಂಶ ಘೋಷಣೆ ಮಾಡಲು ಬರುವದಿಲ್ಲ. ಮತ ಎಣಿಕೆ ಮಾತ್ರ ಮಾಡಲು ಅವಕಾಶವಿದ್ದರಿಂದ‌ ಮತ ಎಣಿಕೆ ಮಾಡಲಾಗಿದೆ.ಕೋರ್ಟ ತೀರ್ಮಾನದ ಬಳಿಕ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಪ್ರಶಾಂತ ಮುಧೋಳ ತಿಳಿಸಿದರು.