ಸಾರಾಂಶ
ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಕಲಿ ಮತದಾರರು ಕಂಡುಬಂದಿದ್ದರೂ ಜಿಲ್ಲಾಡಳಿತ ಅವುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸುವ ಕೆಲಸ ಮಾಡಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಆರೋಪಿಸದರು.
ಬಳ್ಳಾರಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 92,316 ನಕಲಿ ಮತದಾರರಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಡಳಿತಕ್ಕೆ ದಾಖಲೆ ಸಮೇತ ದೂರು ಸಲ್ಲಿಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಕಲಿ ಮತದಾರರು ಕಂಡುಬಂದಿದ್ದರೂ ಜಿಲ್ಲಾಡಳಿತ ಅವುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸುವ ಕೆಲಸ ಮಾಡಿಲ್ಲ. ಜಿಲ್ಲಾ ಚುನಾವಣೆ ಅಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇಕೆ ಎಂದು ಪ್ರಶ್ನಿಸಿದರು.ಕಂಪ್ಲಿ ಕ್ಷೇತ್ರದಲ್ಲಿ 14563 ನಕಲಿ ಮತದಾರರು, ಬಳ್ಳಾರಿ ನಗರ 14563, ಬಳ್ಳಾರಿ ಗ್ರಾಮೀಣ 18769, ಸಿರುಗುಪ್ಪ 25970 ಹಾಗೂ ಸಂಡೂರು ಕ್ಷೇತ್ರದಲ್ಲಿ 15400 ನಕಲಿ ಮತದಾರರಿದ್ದಾರೆ. ಈ ಕುರಿತು ಬಿಜೆಪಿಯಿಂದ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಿದೆ.
ಒಂದೇ ವಾರ್ಡ್ ನಲ್ಲಿ ನಾಲ್ಕೈದು ಹೆಸರಿನವರು ಮತದಾರರ ಪಟ್ಟಿಯಲ್ಲಿದ್ದಾರೆ. ಕೆಲವೆಡೆ ಒಂದೇ ವ್ಯಕ್ತಿಯ ಹೆಸರಿದ್ದು, ತಂದೆ ಹೆಸರು ಬದಲಾಯಿಸಲಾಗಿದೆ. ಆಧಾರ್ ಕಾರ್ಡ್ ಲಿಂಕ್ ಮಾಡದವರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಕಂಪ್ಲಿ ವಿಧಾನಸಭಾ ಕ್ಷೇತ್ರದ ಒಂದು ವಾರ್ಡ್‌ನಲ್ಲಿ ಒಂದೇ ಹೆಸರಿನ ಎಂಟು ಜನರು ಇದ್ದು, ತಂದೆಯೂ ಅದೇ ಹೆಸರಿನವರು ಇರುವುದು ಪತ್ತೆಯಾಗಿದೆ ಎಂದು ವಿವರಿಸಿದರಲ್ಲದೆ, ಈ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್, ಹೇಮಲತಾ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಭದ್ರವಾಡಿ ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ ಸುಗುಣ ಕಾಕರ್ಲ ಸುದ್ದಿಗೋಷ್ಠಿಯಲ್ಲಿದ್ದರು.