ವಿವಿಧ ಕೆಲಸಗಳಿಗೆ ಬಂದಿದ್ದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಯಿತು
ಹೂವಿನಹಡಗಲಿ: ತಾಲೂಕಿನಲ್ಲಿ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆದಿದದ್ದು, ಮತದಾನ ಬೆಳಗಿನಿಂದಲೇ ಬಿರುಸಾಗಿತ್ತು. ಒಟ್ಟು ಶೇ. 93.31 ರಷ್ಟು ಮತದಾನವಾಗಿದೆ.
ತಾಲೂಕಿನಲ್ಲಿ ಹೂವಿನಹಡಗಲಿ, ಹಿರೇಹಡಗಲಿ, ಇಟ್ಟಿಗಿ ಮೂರು ಬೂತ್ಗಳನ್ನು ತೆರೆಯಲಾಗಿತ್ತು. ಒಟ್ಟು 478 ಮತದಾರರನ್ನು ಹೊಂದಿದ್ದು, 446 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಿರೇಹಡಗಲಿ 86ಕ್ಕೆ 75 ಮತ ಚಲಾವಣೆ, ಇಟ್ಟಿಗಿ 112 ಕ್ಕೆ 105 ಮತ ಚಲಾವಣೆ, ಹೂವಿನಹಡಗಲಿ 280ಕ್ಕೆ 266 ಮತಗಳು ಚಲಾವಣೆಯಾಗಿವೆ. ಒಟ್ಟು 478ಕ್ಕೆ 446 ಮತಗಳು ಚಲಾವಣೆಯಾಗಿವೆ.ಬೂತ್ ಬದಲಾವಣೆಗೆ ಒತ್ತಾಯ: ಇಲ್ಲಿನ ತಾಲೂಕು ಕಚೇರಿಯಲ್ಲಿ ವಿಪ ಚುನಾವಣೆಯ ಬೂತ್ ತೆರೆಯಲಾಗಿದೆ. ಇದರಿಂದ ಇಡೀ ತಾಲೂಕಾಡಳಿತವೇ ಸ್ತಬ್ಧವಾಗಿದೆ. ವಿವಿಧ ಕೆಲಸಗಳಿಗೆ ಬಂದಿದ್ದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಯಿತು. ತಾಲೂಕು ಕಚೇರಿ ಆವರಣದಲ್ಲಿ ಉಪ ನೋಂದಣಿ ಕಚೇರಿ, ಖಜಾನೆ ಇಲಾಖೆ, ಆಹಾರ ಇಲಾಖೆ, ಭೂ ಮಾಪನ ಇಲಾಖೆ, ಅಭಿಲೇಖಾಲಯ, ಪಹಣಿ ವಿತರಣಾ ಕೇಂದ್ರ, ಭೂಮಿ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಕಂದಾಯ ಇಲಾಖೆಯ ಶಾಖೆಗಳು ತಾಲೂಕು ಕಚೇರಿ ಸಂರ್ಕೀಣದಲ್ಲಿವೆ.ಇದರಿಂದ ಬೇರೆ ಬೇರೆ ಇಲಾಖೆಗೆ ಹೋಗಿ ಕೆಲಸ ಮಾಡಿಸಿಕೊಳ್ಳಲು ಜನ ಪರದಾಡಿದರು, ವಿಧಾನ ಪರಿಷತ್ ಚುನಾವಣೆಯಿಂದ ಸಾರ್ವಜನಿಕರಿಗೆ ಒಳಗೆ ಹೋಗಲು ಅವಕಾಶವೇ ಇರಲಿಲ್ಲ.
ಇಲ್ಲಿನ ಉಪ ನೋಂದಣಿ ಕಚೇರಿಯೂ ಬಂದ್ ಆಗಿತ್ತು. ಇಂದು ಆಸ್ತಿಗಳ ನೋಂದಣಿ ಮಾಡಲು 13 ಜನರಿಗೆ ಮುಂಚಿತವಾಗಿ ಟೋಕನ್ ವಿತರಣೆ ಮಾಡಲಾಗಿತ್ತು. ಆದರೆ ಚುನಾವಣೆ ಇದ್ದ ಕಾರಣ ಕಚೇರಿಯಲ್ಲಿ ಜನರಿಗೆ ಅವಕಾಶ ಸಿಕ್ಕಿಲ್ಲ, ಇದರಿಂದ ಜನರಿಗೆ ನೀಡಿದ್ದ ಟೋಕನ್ ರದ್ದಾಗಿವೆ.ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಯಲ್ಲಿನ ಮತದಾನ ಕೇಂದ್ರ, ಪಟ್ಟಣದ ಸರ್ಕಾರಿ ಶಾಲೆ, ಇಲ್ಲವೇ ಕಾಲೇಜಿಗೆ ಸ್ಥಳಾಂತರ ಮಾಡಬೇಕು, ಇದೇ ಜಾಗದಲ್ಲೇ ಮುಂದುವರೆದರೇ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದರಿಂದ ಮೇಲಾಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಜನ ಒತ್ತಾಯಿಸಿದರು.