ನಿರಂತರ ಮಳೆಗೆ 93 ಸಾವಿರ ಹೆಕ್ಟೇರ್‌ ಕೃಷಿ, ತೋಟಗಾರಿಕೆ ಬೆಳೆ ಹಾನಿ

| Published : Sep 04 2025, 01:00 AM IST

ನಿರಂತರ ಮಳೆಗೆ 93 ಸಾವಿರ ಹೆಕ್ಟೇರ್‌ ಕೃಷಿ, ತೋಟಗಾರಿಕೆ ಬೆಳೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಒಟ್ಟಾರೆಯಾಗಿ ಜಿಲ್ಲೆಯಲ್ಲಿ 88,970 ಹೆಕ್ಟೇರ್ ಕೃಷಿ ಕ್ಷೇತ್ರದ ಬೆಳೆಗಳು ಮತ್ತು 4,526 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 93,496 ಹೆಕ್ಟೆರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ.

ಧಾರವಾಡ: ಬಹುತೇಕ ಈ ವರ್ಷದ ಮುಂಗಾರು ಹಂಗಾಮು ಮಳೆಯಲ್ಲಿಯೇ ಕಳೆದು ಹೋದ ರೀತಿಯಲ್ಲಿದೆ. ಬೀಜ ಬಿತ್ತುವಾಗಿನಿಂದ ಹಿಡಿದು ಒಕ್ಕುವ ವರೆಗೂ ಮಳೆ ಮಾತ್ರ ಬರುತ್ತಿದ್ದು, ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬೆಳೆಗಳು ಹಾನಿಯಾಗಿವೆ.

ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾನಿಯಾದ ಬೆಳೆಗೆ ಪರಿಹಾರ ಒದಗಿಸಲು ಜಂಟಿ ಸಮೀಕ್ಷೆ ನಡೆಸಿದ್ದು ವರದಿ ಸಹ ಬಿಡುಗಡೆಯಾಗಿದೆ. ನೈಸರ್ಗಿಕ ವಿಕೋಪಗಳಾದ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಕಳೆದ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಒಟ್ಟು 93,496 ಹೆಕ್ಟರ್ ಕ್ಷೇತ್ರದ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾರವಾಡದಲ್ಲಿ 16,910 ಹೆಕ್ಟೇರ್ ಕೃಷಿ ಕ್ಷೇತ್ರ ಮತ್ತು 895 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರ ಸೇರಿದಂತೆ ಧಾರವಾಡ ತಾಲೂಕಿನಲ್ಲಿ ಒಟ್ಟು 17,805 ಹೆಕ್ಟೇರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಹುಬ್ಬಳ್ಳಿ ತಾಲೂಕಿನಲ್ಲಿ 17,998 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿವೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ 1,303 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿವೆ.

ನವಲಗುಂದ ತಾಲೂಕಿನಲ್ಲಿ 23,993 ಹೆಕ್ಟೇರ್ ಕೃಷಿ ಕ್ಷೇತ್ರ ಮತ್ತು 2,323 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆಗಳು ಹಾನಿಯಾಗಿವೆ. ಅಣ್ಣಿಗೇರಿ ತಾಲೂಕಿನಲ್ಲಿ 15,324 ಹೆಕ್ಟೇರ್ ಕೃಷಿ, 1063 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರದ ಬೆಳೆಗಳು ಹಾನಿಯಾಗಿವೆ. ಕುಂದಗೋಳದಲ್ಲಿ 13,440 ಹೆಕ್ಟೇರ್ ಕೃಷಿ ಕ್ಷೇತ್ರ ಮತ್ತು 244 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರ ಬೆಳೆಗಳು ಹಾನಿಯಾಗಿವೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ 88,970 ಹೆಕ್ಟೇರ್ ಕೃಷಿ ಕ್ಷೇತ್ರದ ಬೆಳೆಗಳು ಮತ್ತು 4,526 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 93,496 ಹೆಕ್ಟೆರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ.

ಜಂಟಿ ಸಮೀಕ್ಷೆಯ ಪರಿಶೀಲನಾ ವರದಿಯಂತೆ ಈ ಕ್ಷೇತ್ರಗಳಲ್ಲಿ ಬೆಳೆ ಹಾನಿಯಾದ ರೈತರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಸಂಬಂಧಿಸಿದ ತಹಸೀಲ್ದಾರರ ಕಚೇರಿ, ಸಂಬಂಧಿಸಿದ ಗ್ರಾಮ ಪಂಚಾಯತ್ ಕಚೇರಿ, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಂತರಜಾಲ https://dharwad.nic.in/en/document-category/disaster-management/ ದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಂಬಂಧಿಸಿದ ತಾಲೂಕಿನ ತಹಸೀಲ್ದಾರ, ಕೃಷಿ ಅಥವಾ ತೋಟಗಾರಿಕಾ ಕಚೇರಿಗಳಲ್ಲಿ ಹಾಗೂ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆ. 7ರ ಸಂಜೆ 5ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.