ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಬಸವಲಿಂಗ ಶ್ರೀಗಳ ಮಠಕ್ಕೆ ಬಹು ದೊಡ್ಡ ಇತಿಹಾಸವಿದೆ. ಈ ಮಠದ ಲಿಂಗೈಕ್ಯ ಬಸವಲಿಂಗ ಶ್ರೀಗಳು ಮಹಾ ಪವಾಡ ಪುರುಷರು ಇವರು ಕುಸ್ತಿ ಪಟುಗಳಾಗಿದ್ದರು.ಯೋಗ ಧ್ಯಾನದಲ್ಲಿಯೂ ಅಪಾರ ಆಸಕ್ತಿ ಇದ್ದವರಾಗಿದ್ದರು.
ಬಿಂದುಮಾಧವ ಮಣ್ಣೂರ
ಶಿವಲಿಂಗೇಶ್ವರ ಜಾಲವಾದಿಕನ್ನಡಪ್ರಭ ವಾರ್ತೆ ಅಫಜಲ್ಪುರ/ ಕರಜಗಿ
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಬಸವಲಿಂಗ ಶ್ರೀಗಳ ಮಠಕ್ಕೆ ಬಹು ದೊಡ್ಡ ಇತಿಹಾಸವಿದೆ. ಈ ಮಠದ ಲಿಂಗೈಕ್ಯ ಬಸವಲಿಂಗ ಶ್ರೀಗಳು ಮಹಾ ಪವಾಡ ಪುರುಷರು ಇವರು ಕುಸ್ತಿ ಪಟುಗಳಾಗಿದ್ದರು.ಯೋಗ ಧ್ಯಾನದಲ್ಲಿಯೂ ಅಪಾರ ಆಸಕ್ತಿ ಇದ್ದವರಾಗಿದ್ದರು.ಈ ಮಠದಲ್ಲಿ ಯಾವುದೇ ಜಾತಿ ಮತ ಪಂಥ ಬೇಧವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಹಾಗೆ ಎಲ್ಲ ಸಮಾಜದ ಭಾಂದವರೆಲ್ಲರೂ ಅಣ್ಣ ತಮ್ಮಂದಿರಂತೆ ಮಠದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.ಸರ್ವರ ಸರ್ವತೋಮುಖ ಅಭಿವೃದ್ಧಿಗೆ ಸಮಾಜದ ಏಳಿಗೆ ಹಗಲಿರುಳು ಶ್ರಮಿಸುತ್ತಿರುವ ಗಡಿನಾಡಿನ ಮಠ.ಬಸವಲಿಂಗೇಶ್ವರ ಮಹಾಸ್ವಾಮಿಗಳ 94 ನೇ ಪುಣ್ಯ ಸ್ಮರಣೋತ್ಸವ ವಿರಕ್ತಮಠ ನಾಗಣಸೂರ ಮಠದಲ್ಲಿ ನಡೆಯಲಿದೆ. ಸುಮಾರು15 ವರ್ಷಗಳ ಹಿಂದೆ ಆರಂಭವಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ದುಂದುವೆಚ್ಚ ತಪ್ಪಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗುತ್ತಿದೆ.ಇಲ್ಲಿಯವರೆಗೂ ಸುಮಾರು 1000 ಸಾಮೂಹಿಕ ವಿವಾಹಗಳನ್ನು ಮಾಡಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ. ಈ ಬಾರಿಯೂ 40 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ
ನಂತರ 15 ಸಾವಿರ ಸುಹಾಸಿನಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಇಲ್ಲಿ ಎಲ್ಲಾ ಮುತೈದೆಯರಿಗೆ ಐದು ಬಳೆ,ಕುಪ್ಪಸ,ಹೂವಿನ ದಂಡೆ, ಮಠದಿಂದ ಕೊಡಲಾಗುತ್ತದೆ.15 ಸಾವಿರ ಜಂಗಮ ಗಣಾರಾಧನೆ ಜರುಗಲಿದೆ. ಗ್ರಾಮದ ಪ್ರತಿಯೊಬ್ಬ ಭಕ್ತರು ತಾಯಂದಿರು ತಮ್ಮ ಸ್ವಂತ ಖರ್ಚಿನಿಂದ ಮಡಿಯಿಂದ 94 ಹೋಳಿಗೆಯಿಂದ ಹಿಡಿದು 500 ಹೋಳಿಗೆ ಮಾಡಿ ಮಠಕ್ಕೆ ಕೊಡುತ್ತಾರೆ. ನಾಗಣಸೂರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಭಕ್ತರು ಶ್ರೀ ಮಠಕ್ಕೆ ತುಪ್ಪದ ಕಾಣಿಕೆ ನೀಡುತ್ತಾರೆಲಕ್ಷಾಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಶ್ರೀ ಮ ನಿ ಪ್ರ ಅಭಿನವ ಬಸವಲಿಂಗ ಮಹಾಸ್ವಾಮಿಗಳು ಮತ್ತು ಅಭಿನವ ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಅಕ್ಕಲಕೋಟ ತಾಲೂಕಿನ ಶಾಸಕ ಸಚೀನ ಕಲ್ಯಾಣಶೆಟ್ಟಿ ವಿವಿಧ ಮುಖಂಡರು ಭಾಗವಹಿಸುವರು.ನಾಗಣಸೂರ ಗ್ರಾಮದಲ್ಲಿ ಶಿಕ್ಷಣ ಪಡೆದು ಹಲವಾರು ಶಿಕ್ಷಕರು ಅಫಜಲ್ಪುರ ಹಾಗೂ ಅಕ್ಕಲಕೋಟ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಡಾಕ್ಟರಗಳಾಗಿ, ಪೊಲೀಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿರುವ ಈ ಗ್ರಾಮದಲ್ಲಿ ಮರಾಠಿ ಭಾಷೆ ಮಾತನಾಡುವ ಜನರು ಅತಿ ವಿರಳ ಕನ್ನಡ ಭಾಷೆಯೇ ಹೆಚ್ಚಾಗಿ ಮಾತನಾಡುವುದು ಈ ಗ್ರಾಮದ ವೈಶಿಷ್ಟ್ಯ.
*ಮಠದ ವಿಶೇಷ* ಜಾತ್ರೆಗೆ ಎಷ್ಟೇ ಭಕ್ತರು ಬಂದರೂ ಶ್ರೀ ಮಠದಲ್ಲಿ ಹೊಳಿಗೆ ತುಪ್ಪ ಹುಗ್ಗಿ ಖಾಲಿಯಾಗುವುದಿಲ್ಲ. ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ದಾಸೋಹ ನಡೆಯುತ್ತದೆ. ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಅಕ್ಕಲಕೋಟ, ಮಾಶಾಳ, ಹೈದ್ರಾ, ಹೊಸೂರ, ಮಣ್ಣೂರ, ತೋಳನೂರ, ಕರಜಗಿಯಿಂದ ಬರುವ ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ.23ರಂದು ಬೆಳಗ್ಗೆ 4ರಿಂದ ಬಸವಲಿಂಗ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ 8ಕ್ಕೆ ಷಟಸ್ಥಲ ಧ್ವಜಾರೋಹಣ, 10ಕ್ಕೆ ಸಾಮೂಹಿಕ ವಿವಾಹ, 20 ಸಾವಿರ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ 15000 ಜಂಗಮ ಗಣಾರಾಧನೆ ಜರುಗಲಿದೆ. 24 ರಂದು ಸಂಜೆ 5ಕ್ಕೆ ಬಸವಲಿಂಗ ಮಹಾಸ್ವಾಮಿಗಳ ಭಾವಚಿತ್ರ ಮೆರವಣಿಗೆ ಭಜನೆ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಮ.ನಿ.ಪ್ರ ಡಾ ಅಭಿನವ ಬಸವಲಿಂಗ ಮಹಾಸ್ವಾಮೀಜಿ ತಿಳಿಸಿದರು.